ಫ್ಲೋರಿಡಾ, ನ. 2: ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ ಪ್ರತಿಕೂಲ ಹವಾಮಾನದ ನಡುವೆ ಹಾರಾಟ ನಡೆಸುತ್ತಿದ್ದ ಖಾಸಗಿ ಜೆಟ್ ವಿಮಾನವೊಂದು ನಿಯಂತ್ರಣ ಕಳೆದುಕೊಂಡು ಜನನಿಬಿಡ ರಸ್ತೆಗೆ ಅಪ್ಪಳಿಸಿದೆ. ಬೆಂಕಿಯ ಉಂಡೆಯಂತೆ ನೆಲಕ್ಕೆ ಅಪ್ಪಳಿಸಿದ ವಿಮಾನ ದುರಂತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಟೆಕ್ಸಾಸ್‌ನ ಆಸ್ಟಿನ್-ಬರ್ಗ್‌ಸ್ಟ್ರಾಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಹಾಮಾಸ್‌ಗೆ ತೆರಳುತ್ತಿದ್ದ ಖಾಸಗಿ ವಿಮಾನವು ಫ್ಲೋರಿಡಾದ ಪಾಮ್ ಬೀಚ್ ಕೌಂಟಿಯ ಗ್ರೀನ್‌ಏಕರ್ಸ್ ನಗರದಲ್ಲಿ ಪತನಗೊಂಡಿದೆ. ಅಪಘಾತದ ನಿಖರ ಕಾರಣ ಮತ್ತು ವಿಮಾನದಲ್ಲಿದ್ದ ಪ್ರಯಾಣಿಕರ ವಿವರಗಳನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ.
ಭಾನುವಾರ ಫ್ಲೋರಿಡಾದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಸೋಮವಾರ ಮಧ್ಯಾಹ್ನದವರೆಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿತ್ತು. ಇಂತಹ ಪ್ರತಿಕೂಲ ವಾತಾವರಣದಲ್ಲಿ ಸುಮಾರು 35,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಮೇಲೆ ಮಂಜುಗಡ್ಡೆ ಸಂಗ್ರಹವಾಗುತ್ತಿರುವುದನ್ನು ಗಮನಿಸಿದ ಪೈಲಟ್‌ಗಳು ವಾಯು ಸಂಚಾರ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು.
ವಿಮಾನವು ತೀವ್ರ ಗಾಳಿಯ ಒತ್ತಡ ಹಾಗೂ ಪ್ರಕ್ಷುಬ್ಧ ವಾತಾವರಣದಿಂದ ಮೇಲಕ್ಕೆ ಮತ್ತು ಕೆಳಕ್ಕೆ ಅಲುಗಾಡುತ್ತಿತ್ತು. ಹೀಗಾಗಿ ಇನ್ನೂ 2,000 ಅಡಿ ಎತ್ತರಕ್ಕೆ ಹಾರಲು ಪೈಲಟ್‌ಗಳು ಅನುಮತಿ ಕೋರಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿ ವಿಮಾನವು ನಿಯಂತ್ರಣ ಕಳೆದುಕೊಂಡು ಅತ್ಯಂತ ವೇಗವಾಗಿ ಕೆಳಮುಖವಾಗಿ ಧಾವಿಸಲು ಆರಂಭಿಸಿತು.
ಆರಂಭದಲ್ಲಿ ಪ್ರತಿ ನಿಮಿಷಕ್ಕೆ 8,000 ಅಡಿ ವೇಗದಲ್ಲಿ ಎತ್ತರ ಕಳೆದುಕೊಳ್ಳುತ್ತಿದ್ದ ವಿಮಾನವು ಕೆಲವೇ ಕ್ಷಣಗಳಲ್ಲಿ 10,000 ಅಡಿ, ನಂತರ 20,000 ಅಡಿ ಹಾಗೂ ಗರಿಷ್ಠ 30,000 ಅಡಿ ವೇಗದಲ್ಲಿ ಕೆಳಗಿಳಿಯತೊಡಗಿತು. ಈ ಅಸಹಜ ವೇಗವು ವಿಮಾನದ ಸುರಕ್ಷತಾ ಮಿತಿಯನ್ನೂ ಮೀರಿತ್ತು ಎಂದು ವಿಮಾನ ಹಾರಾಟದ ದತ್ತಾಂಶಗಳಿಂದ ತಿಳಿದುಬಂದಿದೆ.
ವಿಮಾನ ನಿಯಂತ್ರಣ ತಪ್ಪುತ್ತಿರುವುದನ್ನು ಅರಿತ ಪೈಲಟ್ ತುರ್ತು ಪರಿಸ್ಥಿತಿ ಘೋಷಿಸಿ ನಿಯಂತ್ರಣ ಕೊಠಡಿಯ ನೆರವು ಕೋರಿದ್ದರು. 'ಮೇಡೇ, ಮೇಡೇ... ನಾವು ಅತ್ಯಂತ ವೇಗವಾಗಿ ಕೆಳಗಿಳಿಯುತ್ತಿದ್ದೇವೆ' ಎಂದು ಆತಂಕದಿಂದ ಸಂದೇಶ ರವಾನಿಸಿದ್ದರು. ಬಳಿಕ ವಿಮಾನವು ಬಲಭಾಗಕ್ಕೆ ತೀವ್ರವಾಗಿ ವಾಲಿ ನೆಲಕ್ಕೆ ಅಪ್ಪಳಿಸಿದೆ.
ಅಪಘಾತಕ್ಕೂ ಮುನ್ನ ವಿಮಾನದ ಮೇಲೆ ಹಗುರ ಪ್ರಮಾಣದಲ್ಲಿ ಮಂಜುಗಡ್ಡೆ ಸಂಗ್ರಹವಾಗುತ್ತಿದ್ದು, ಮಧ್ಯಮ ಪ್ರಮಾಣದ ಪ್ರಕ್ಷುಬ್ಧ ಹವಾಮಾನ ಎದುರಾಗಿರುವುದಾಗಿ ಪೈಲಟ್ ತಿಳಿಸಿದ್ದರು. ವಿಮಾನವು ಸುಮಾರು 700 ಅಡಿಗಳಷ್ಟು ಮೇಲಕ್ಕೆ ಮತ್ತು ಕೆಳಕ್ಕೆ ಅಲುಗಾಡುತ್ತಿತ್ತು ಎಂಬುದು ವಾಯು ಸಂಚಾರ ನಿಯಂತ್ರಣದ ಸಂಭಾಷಣೆಯ ಧ್ವನಿಮುದ್ರಿಕೆಯಿಂದ ತಿಳಿದುಬಂದಿದೆ.
ಪರಿಸ್ಥಿತಿ ಕ್ಷಣಕ್ಷಣಕ್ಕೂ ಹದಗೆಡುತ್ತಿದ್ದಂತೆ ವಿಮಾನವನ್ನು ನಿಯಂತ್ರಿಸಲು ಪೈಲಟ್‌ಗಳು ನಡೆಸಿದ ಪ್ರಯತ್ನ ವಿಫಲವಾಯಿತು. ಕೊನೆಯ ಕ್ಷಣದಲ್ಲಿ 'ನಾವು ನೆಲಕ್ಕೆ ಅಪ್ಪಳಿಸಲಿದ್ದೇವೆ' ಎಂದು ಪೈಲಟ್ ನೀಡಿದ ಸಂದೇಶದ ಬಳಿಕ ವಿಮಾನದ ಸಂಪರ್ಕ ಕಡಿತಗೊಂಡಿತು ಎಂದು ವರದಿಯಾಗಿದೆ.
ಅಪಘಾತದ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ತುರ್ತು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸಮೀಪದ ಮೊಬೈಲ್ ಮನೆಗಳ ವಸತಿ ಪ್ರದೇಶದಿಂದ ಸುಮಾರು 600 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಪತನಗೊಂಡಿರುವುದು ಖಾಸಗಿ ವಿಮಾನವಾಗಿದ್ದು, ಪ್ರಯಾಣಿಕರ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಆಸ್ಟಿನ್-ಬರ್ಗ್‌ಸ್ಟ್ರಾಮ್ ವಿಮಾನ ನಿಲ್ದಾಣದ ವಕ್ತಾರ ಜಿಮ್ ರೆನಾಲ್ಡ್ಸ್ ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ರಸ್ತೆಯನ್ನು ಸಂಚಾರಕ್ಕೆ ಬಂದ್ ಮಾಡಲಾಗಿದ್ದು, ಫೆಡರಲ್ ವಿಮಾನಯಾನ ಆಡಳಿತದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ವಿಮಾನದ ಮೇಲೆ ಮಂಜುಗಡ್ಡೆ ಸಂಗ್ರಹವಾಗಿರುವುದು, ಪ್ರತಿಕೂಲ ಹವಾಮಾನ ಹಾಗೂ ತಾಂತ್ರಿಕ ಸಮಸ್ಯೆಗಳ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಯಬೇಕಿದೆ.
ದುರಂತ ಸಂಭವಿಸಿದ ಗ್ರೀನ್‌ಏಕರ್ಸ್ ನಗರವು ಸುಮಾರು 45,000 ಜನಸಂಖ್ಯೆ ಹೊಂದಿದ್ದು, ವೆಸ್ಟ್ ಪಾಮ್ ಬೀಚ್‌ನಿಂದ ಸುಮಾರು 11 ಕಿ.ಮೀ. ನೈಋತ್ಯ ದಿಕ್ಕಿನಲ್ಲಿದೆ.