ಅಮರಾವತಿ: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ‘ಮುರಸು’ ಚಂಡಮಾರುತ ತೀವ್ರ ಸ್ವರೂಪ ಪಡೆಯುತ್ತಿದ್ದು, ನವೆಂಬರ್ 3ರಂದು ಆಂಧ್ರಪ್ರದೇಶದ ದಕ್ಷಿಣ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಡಮಾರುತ ಕರಾವಳಿ ದಾಟುವ ಸಂದರ್ಭದಲ್ಲಿ ಗಂಟೆಗೆ 100ರಿಂದ 110 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಕೆಲವೊಮ್ಮೆ ಅದರ ವೇಗ 120 ಕಿ.ಮೀ. ತಲುಪುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ.
ನವೆಂಬರ್ 2ರ ವೇಳೆಗೆ ಚಂಡಮಾರುತ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ. ನವೆಂಬರ್ 1ರ ಮಧ್ಯಾಹ್ನದ ವೇಳೆಗೆ ನೈಋತ್ಯ ಮತ್ತು ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿದ್ದ ಚಂಡಮಾರುತ ಗಂಟೆಗೆ 27 ಕಿ.ಮೀ. ವೇಗದಲ್ಲಿ ಪಶ್ಚಿಮ-ವಾಯವ್ಯ ದಿಕ್ಕಿನತ್ತ ಚಲಿಸುತ್ತಿತ್ತು. ಇದು ಚೆನ್ನೈನಿಂದ ಸುಮಾರು 480 ಕಿ.ಮೀ., ನೆಲ್ಲೂರಿನಿಂದ 550 ಕಿ.ಮೀ., ಮಚಲಿಪಟ್ಟಣಂನಿಂದ 560 ಕಿ.ಮೀ., ಒಂಗೋಲ್‌ನಿಂದ 600 ಕಿ.ಮೀ. ಹಾಗೂ ವಿಶಾಖಪಟ್ಟಣಂನಿಂದ 610 ಕಿ.ಮೀ. ದೂರದಲ್ಲಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತದ ಪರಿಣಾಮ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ, ಬಿರುಗಾಳಿ ಮತ್ತು ಪ್ರವಾಹ ಪರಿಸ್ಥಿತಿ ಉಂಟಾಗುವ ಆತಂಕ ಎದುರಾಗಿದೆ. ನವೆಂಬರ್ 3ರಂದು ಬುಡಮೇರು ಪ್ರದೇಶಕ್ಕೆ ಸುಮಾರು 32,500 ಕ್ಯೂಸೆಕ್ ನೀರು ಹರಿದುಬರುವ ನಿರೀಕ್ಷೆಯಿದೆ. ಎರ್ರಕಲ್ವ, ಗೊನೆಲವಾಗು, ಜಲ್ಲೇರು ಮತ್ತು ಪಂಪಾ ಸೇರಿದಂತೆ ವಿವಿಧ ಜಲಮೂಲಗಳಲ್ಲಿ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆಯಿದೆ. ಬಿರುಗಾಳಿಯಿಂದ 12 ಜಿಲ್ಲೆಗಳಲ್ಲಿ ಸುಮಾರು 15,128 ವಿದ್ಯುತ್ ಕಂಬಗಳಿಗೆ ಹಾನಿಯಾಗಬಹುದು ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ.
ಚಂಡಮಾರುತದ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೋಮವಾರ ನಿಗದಿಯಾಗಿದ್ದ ತಮ್ಮ ದೆಹಲಿ ಪ್ರವಾಸವನ್ನು ರದ್ದುಗೊಳಿಸಿ, ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ಸಿದ್ಧತೆಯ ಪರಿಶೀಲನೆಗೆ ಮುಂದಾಗಿದ್ದಾರೆ. ತುರ್ತು ಪರಿಸ್ಥಿತಿ ಎದುರಿಸಲು ಅಗತ್ಯ ಸಿಬ್ಬಂದಿ, ಯಂತ್ರೋಪಕರಣಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ಸನ್ನದ್ಧ ಸ್ಥಿತಿಯಲ್ಲಿಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿದ್ಯುತ್ ಸಂಪರ್ಕ ಕಡಿತಗೊಂಡರೆ ತ್ವರಿತವಾಗಿ ಮರುಸ್ಥಾಪಿಸಲು ಕಾರ್ಯಯೋಜನೆ ರೂಪಿಸಬೇಕು. ಚಂಡಮಾರುತದ ಪರಿಸ್ಥಿತಿ ಕುರಿತು ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಅಧಿಕೃತ ಮಾಹಿತಿ ಪ್ರಕಟಿಸಬೇಕು. ಬಿರುಗಾಳಿಯ ಸಂದರ್ಭದಲ್ಲಿ ಮೊಬೈಲ್ ಸಂಪರ್ಕ ವ್ಯವಸ್ಥೆಗೆ ಅಡಚಣೆಯಾಗದಂತೆ ದೂರಸಂಪರ್ಕ ಕಂಪನಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಇತ್ತೀಚೆಗೆ ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ್ದ ‘ಅರ್ನಬ್’ ಚಂಡಮಾರುತದಿಂದ ಉಂಟಾದ ಹಾನಿ ಹಾಗೂ ಪರಿಹಾರ ಕಾರ್ಯಗಳ ಪ್ರಗತಿಯನ್ನೂ ಮುಖ್ಯಮಂತ್ರಿ ಪರಿಶೀಲಿಸಿದ್ದಾರೆ. ಅಕ್ಟೋಬರ್ 28ರಂದು ಅಪ್ಪಳಿಸಿದ್ದ ಈ ಚಂಡಮಾರುತದಲ್ಲಿ ಏಳು ಮಂದಿ ಮೃತಪಟ್ಟಿದ್ದು, ಕೃಷಿ ಬೆಳೆಗಳು, ವಿದ್ಯುತ್ ವ್ಯವಸ್ಥೆ ಮತ್ತು ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿತ್ತು ಎಂದು ವರದಿಯಾಗಿದೆ.
ಇತ್ತ ‘ಮುರಸು’ ಚಂಡಮಾರುತದ ಹಿನ್ನೆಲೆಯಲ್ಲಿ ದಕ್ಷಿಣ ಒಡಿಶಾದಲ್ಲಿಯೂ ಕಟ್ಟೆಚ್ಚರ ಘೋಷಿಸಲಾಗಿದೆ. ತಗ್ಗು ಪ್ರದೇಶಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿರುವ ಜನರನ್ನು ಅಗತ್ಯವಿದ್ದಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ ಎಂದು ಒಡಿಶಾ ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ತಿಳಿಸಿದ್ದಾರೆ. ನವೆಂಬರ್ 2ರಿಂದ ರಾಜ್ಯದಲ್ಲಿ ಮಳೆ ಆರಂಭವಾಗುವ ಸಾಧ್ಯತೆಯಿದ್ದು, ನವೆಂಬರ್ 3 ಮತ್ತು 4ರಂದು ಮಳೆಯ ತೀವ್ರತೆ ಹೆಚ್ಚಾಗಲಿದೆ ಎಂದು ಭುವನೇಶ್ವರ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.
‘ಮುರಸು’ ಎಂಬ ಪದಕ್ಕೆ ಯುದ್ಧದ ನಗಾರಿ ಎಂಬ ಅರ್ಥವಿದ್ದು, ಈ ಚಂಡಮಾರುತಕ್ಕೆ ಭಾರತವೇ ಹೆಸರನ್ನು ಸೂಚಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.