ವಿಜಯಪುರ, ಸೆ. 17 : ಬಿಜೆಪಿಯಿಂದ ಹೊರಗಿರುವ ಕೆ.ಎಸ್. ಈಶ್ವರಪ್ಪ, ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಪಕ್ಷದಿಂದ ದೂರವಾಗಿರುವ ನಾಯಕರನ್ನು ಹಾಗೂ ಕಾಂಗ್ರೆಸ್‌ನ ಅಸಮಾಧಾನಿತರನ್ನು ಬಿಜೆಪಿಗೆ ಕರೆತರುವ ಅಗತ್ಯವಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಅಭಿಪ್ರಾಯಪಟ್ಟರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಶಾಶ್ವತ ಶತ್ರುಗಳೂ ಅಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಪಕ್ಷದಿಂದ ದೂರವಾಗಿರುವವರನ್ನು ಮರಳಿ ಕರೆತರಬೇಕು ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮುಂದಿನ ನವೆಂಬರ್‌ಗೆ ಮೂರು ವರ್ಷ ಪೂರ್ಣಗೊಳಿಸಲಿದ್ದಾರೆ. ಅವರನ್ನು ಮುಂದುವರಿಸಬೇಕೇ ಅಥವಾ ಬದಲಾಯಿಸಬೇಕೇ ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ. ಪಕ್ಷ ಸಂಘಟನೆಯಲ್ಲಿ ಆಗಿರುವ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡು ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ಇತ್ತೀಚಿನ ಬಳ್ಳಾರಿ ಪಾದಯಾತ್ರೆ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದೆ ಎಂದರು.
ಯತ್ನಾಳ ಕುರಿತು ಕೇಳಿದ ಪ್ರಶ್ನೆಗೆ, “ಯತ್ನಾಳ ನನ್ನ ಒಳ್ಳೆಯ ಸ್ನೇಹಿತರು” ಎಂದು ಪ್ರತಿಕ್ರಿಯಿಸಿದರು.
ಇತ್ತೀಚಿನ ಅಹಿಂದ ಸಭೆಗೆ ಪ್ರಮುಖ ಮುಖಂಡರನ್ನೇ ಆಹ್ವಾನಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಅಹಿಂದ ಎರಡು ಭಾಗವಾಗಿದೆ ಎಂದು ನಿರಾಣಿ ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎಂದ ಅವರು, ಕಾಂಗ್ರೆಸ್ ಶಾಸಕರಲ್ಲಿಯೂ ಅಸಮಾಧಾನವಿದೆ ಎಂದು ಆರೋಪಿಸಿದರು.
ನಿರಾಣಿ ಗ್ರೂಪ್ ಆಫ್ ಕಂಪನೀಸ್ ಆರಂಭಿಸಲು ಉದ್ದೇಶಿಸಿರುವ ಬಯೋ ಪ್ಲಾಸ್ಟಿಕ್ ಘಟಕಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅನುಮತಿ ನೀಡಿದ್ದಾರೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ವಿಜಯಪುರಕ್ಕೆ ಮೈಸೂರು ಸೋಪ್ ಫ್ಯಾಕ್ಟರಿ ತರುವುದಾಗಿ ಹೇಳಿದ್ದು, ಇಲಾಖೆಯ ಕೆಲಸಗಳು ಇನ್ನಷ್ಟು ವೇಗ ಪಡೆಯಬೇಕಿದೆ ಎಂದು ನಿರಾಣಿ ಹೇಳಿದರು.