ಬೆಂಗಳೂರು, ಸೆ. 16 : ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಬಹಿರಂಗವಾಗಿ ಪ್ರಶಂಸಿಸುತ್ತ ಬಂದಿರುವ ಹಾಗೂ ಇತ್ತೀಚಿನ ಜೆನ್ ಝಡ್ ಯುವಜನರ ಪ್ರತಿಭಟನೆ ಕುರಿತು ಟೀಕಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ಕನ್ನಡದ ಹಿರಿಯ ನಟ ಅನಂತ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ 2024ನೇ ಸಾಲಿನ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜಕುಮಾರ ಅವರ ಬಳಿಕ ಹಿರಿಯ ನಟ ಅನಂತ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ.. ಡಾ. ರಾಜಕುಮಾರ ಅವರಿಗೆ 1995ನೇ ಸಾಲಿನ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ನೀಡಲಾಗಿತ್ತು. ಇದೀಗ ಸುಮಾರು ಮೂರು ದಶಕಗಳ ಬಳಿಕ ಕನ್ನಡ ಚಿತ್ರರಂಗದ ನಟ ಅನಂತ ನಾಗ್ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅನಂತ ನಾಗ್, ಯುವಜನರ ಪ್ರತಿಭಟನೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಇಂತಹ ಪ್ರತಿಭಟನಾ ಪ್ರವೃತ್ತಿಯನ್ನು ನಗರಗಳಲ್ಲಿ ಹರಡುತ್ತಿರುವ ‘ರೋಗ’ ಎಂದು ಬಣ್ಣಿಸಿದ್ದ ಅವರು, ಪ್ರತಿಭಟನಾನಿರತ ಜೆನ್ ಝಡ್ ಯುವಜನರ ಕ್ಷಮೆಯನ್ನು ಪ್ರಧಾನಿ ನರೇಂದ್ರ ಮೋದಿ ಕೋರಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಪ್ರಧಾನಿ ಕ್ಷಮೆ ಕೇಳುವ ಅಗತ್ಯವಿರಲಿಲ್ಲ; ತಾವು ಅವರ ಸ್ಥಾನದಲ್ಲಿದ್ದರೆ ಕ್ಷಮೆ ಕೇಳುತ್ತಿರಲಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು.
ಅವರ ಈ ಹೇಳಿಕೆಗಳು ರಾಜಕೀಯ ವಲಯದಲ್ಲೂ ಪ್ರತಿಕ್ರಿಯೆಗೆ ಕಾರಣವಾಗಿದ್ದವು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಎಂ.ಜಿ. ಹೆಗಡೆ ಅವರು ಅನಂತ ನಾಗ್ ಹೇಳಿಕೆಗಳನ್ನು ಟೀಕಿಸಿದ್ದರು. ವಿದ್ಯಾರ್ಥಿಗಳು ಮತ್ತು ಯುವಜನರ ಪ್ರತಿಭಟನೆ ಕುರಿತು ಅವರು ನೀಡಿದ ಹೇಳಿಕೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಪರ-ವಿರೋಧ ಚರ್ಚೆ ನಡೆದಿತ್ತು.