ಹೊಸದಿಲ್ಲಿ, ಸೆ. 16 : ಕನ್ನಡದ ಹಿರಿಯ ನಟ ಅನಂತ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ 2024ನೇ ಸಾಲಿನ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ.
ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಹಾಗೂ ವೈವಿಧ್ಯಮಯ ಪಾತ್ರಗಳ ಮೂಲಕ ಹಲವು ತಲೆಮಾರುಗಳ ಪ್ರೇಕ್ಷಕರ ಮನಗೆದ್ದಿರುವ ಅನಂತ ನಾಗ್ ಅವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರ ಬುಧವಾರ ಈ ಘೋಷಣೆ ಮಾಡಿದೆ.
ಸೆಪ್ಟೆಂಬರ್ 22ರಂದು ಗುಜರಾತ್‌ನ ಏಕತಾ ನಗರದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
1948ರ ಸೆಪ್ಟೆಂಬರ್ 4ರಂದು ಜನಿಸಿದ ಅನಂತ ನಾಗ್ ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ ಎನ್ನಲಾಗಿದೆ. ಅವರು ಕನ್ನಡದ ಜತೆಗೆ ವಿವಿಧ ಭಾಷೆಗಳ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ದೂರದರ್ಶನದ ಜನಪ್ರಿಯ ‘ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲಿಯೂ ಅವರು ಅಭಿನಯಿಸಿದ್ದರು.
ಅನಂತ ನಾಗ್ ಅವರಿಗೆ 2025ರಲ್ಲಿ ಕೇಂದ್ರ ಸರಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದೀಗ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಅವರ ಮುಡಿಗೇರಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅನಂತ ನಾಗ್ ಅವರನ್ನು ಅಭಿನಂದಿಸಿದ್ದು, ಹಲವು ದಶಕಗಳಿಂದ ಅವರ ಸಹಜ ಅಭಿನಯ, ವೈವಿಧ್ಯಮಯ ಪಾತ್ರ ನಿರ್ವಹಣೆ ಮತ್ತು ಕಲಾ ಪ್ರತಿಭೆ ಭಾರತೀಯ ಚಿತ್ರರಂಗದಲ್ಲಿ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಮಹತ್ವದ ಛಾಪು ಮೂಡಿಸಿದೆ ಎಂದು ಹೇಳಿದ್ದಾರೆ.
1969ರಲ್ಲಿ ಸ್ಥಾಪಿಸಲಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಭಾರತೀಯ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಜೀವಮಾನದ ವಿಶಿಷ್ಟ ಕೊಡುಗೆ ನೀಡಿದ ಸಾಧಕರಿಗೆ ನೀಡಲಾಗುವ ದೇಶದ ಅತ್ಯುನ್ನತ ಚಲನಚಿತ್ರ ಗೌರವವಾಗಿದೆ.