ಹೊಸದಿಲ್ಲಿ, ಮೇ 18 : ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಹಾಗೂ ಗೋವಾದಲ್ಲಿರುವ ಆಮ್ ಆದ್ಮಿ ಪಕ್ಷದ ನಾಯಕ ದೀಪಕ್ ಸಿಂಗ್ಲಾ ಮತ್ತು ಇತರರಿಗೆ ಸೇರಿದ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.
ದೀಪಕ್ ಸಿಂಗ್ಲಾ ಅವರು ವಿಶ್ವಾಸ್‌ನಗರ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿ 2014ರಲ್ಲಿಯೂ ಜಾರಿ ನಿರ್ದೇಶನಾಲಯವು ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಹೂಡಿಕೆ ವಂಚನೆ ಮೂಲಕ ಕೆಲವು ವ್ಯಕ್ತಿಗಳಿಗೆ ಸುಮಾರು ₹180 ಕೋಟಿ ವಂಚನೆ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಶೋಧ ಕಾರ್ಯಾಚರಣೆ ನಡೆಸಿದೆ.
ತನಿಖೆಯ ಭಾಗವಾಗಿ ದಿಲ್ಲಿಯ ಸುಭಾಷ್‌ನಗರದಲ್ಲಿರುವ ಬಾಬಾಜಿ ಫೈನಾನ್ಸ್ ಸಮೂಹಕ್ಕೆ ಸಂಬಂಧಿಸಿದ ರಾಮ್ ಸಿಂಗ್ ಎಂಬುವರ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.