ಹೊಸದಿಲ್ಲಿ, ಮೇ 22 : ಬಹುಭಾಷಾ ನಟ ಪ್ರಕಾಶ ಇತ್ತೀಚೆಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದು ಭಾರೀ ವೈರಲ್ ಆಗಿದೆ.
ವಿಡಿಯೋದಲ್ಲಿ ಮಾವಿನ ಹಣ್ಣು ತಿನ್ನುತ್ತಾ ಪ್ರಕಾಶ ಮಾಡಿದ ವ್ಯಂಗ್ಯಾತ್ಮಕ ಹೇಳಿಕೆ ಇದೀಗ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2019ರಲ್ಲಿ ನಟ ಅಕ್ಷಯ್ ಕುಮಾರ್ ಜತೆ ನಡೆಸಿದ್ದ ಮಾವಿನ ಹಣ್ಣು ಕುರಿತ ಮಾತುಕತೆಯನ್ನು ನೆನಪಿಸಿಕೊಂಡು ಹಲವರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರಕಾಶ, ಐಸ್‌ಕ್ರೀಮ್ ಜತೆ ಇಮಾಮ್ ಪಸಂದ್ ಮಾವಿನ ಹಣ್ಣು ಸೇವಿಸುತ್ತಿರುವುದು ಕಾಣಿಸುತ್ತದೆ. ಈ ವೇಳೆ ಅವರು, ನೋಡಿ ಮೋದಿಜಿ, ಮಾವಿನ ಹಣ್ಣನ್ನು ಹೀಗೆ ಕತ್ತರಿಸಿ, ಐಸ್‌ಕ್ರೀಮ್ ಹಾಕಿಕೊಂಡು ಜಿರಳೆಗಳು ಹೀಗೆ ತಿನ್ನುತ್ತವೆ ಎಂದು ವ್ಯಂಗ್ಯವಾಗಿ ಹೇಳಿರುವುದು ಕೇಳಿಬಂದಿದೆ.
ಪ್ರಕಾಶ ಹೇಳಿಕೆಯಲ್ಲಿ ಬಳಸಿರುವ ಜಿರಳೆಗಳು ಎಂಬ ಪದಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಕೆಲವರು ಇದನ್ನು ರಾಜಕೀಯ ವ್ಯಂಗ್ಯ ಎಂದು ಸಮರ್ಥಿಸಿಕೊಂಡಿದ್ದರೆ, ಮತ್ತೂ ಕೆಲವರು ಟೀಕಿಸಿದ್ದಾರೆ.
2019ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ನಟ ಅಕ್ಷಯ್ ಕುಮಾರ್‌ಗೆ ನೀಡಿದ್ದ ಸಂದರ್ಶನದಲ್ಲಿ ಮಾವಿನ ಹಣ್ಣು ತಿನ್ನುವ ರೀತಿಯ ಕುರಿತು ಮಾತನಾಡಿದ್ದರು. ಆ ವಿಡಿಯೋ ಆ ಸಮಯದಲ್ಲಿ ವ್ಯಾಪಕ ವೈರಲ್ ಆಗಿತ್ತು. ಇದೀಗ ಪ್ರಕಾಶ ವಿಡಿಯೋವನ್ನು ಅದಕ್ಕೆ ಹೋಲಿಕೆ ಮಾಡಲಾಗುತ್ತಿದೆ.
ಪ್ರಕಾಶ ಸಾಮಾಜಿಕ ಹಾಗೂ ರಾಜಕೀಯ ವಿಚಾರಗಳ ಕುರಿತು ತಮ್ಮ ನೇರ ಅಭಿಪ್ರಾಯಗಳಿಂದಲೇ ಪದೇಪದೇ ಸುದ್ದಿಯಾಗುತ್ತಿದ್ದು, ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಟೀಕೆ ವ್ಯಕ್ತಪಡಿಸಿದ್ದಾರೆ. ಇದೀಗ ಅವರ ಹೊಸ ವಿಡಿಯೋ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.