ಬೆಳಗಾವಿ, ಮಾ. 30 : ಮುಂದುವರೆದ ರಾಜ್ಯವೆಂಬ ಹೆಗ್ಗಳಿಕೆಯನ್ನು ಹೊಂದಿರುವ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮೂಢನಂಬಿಕೆಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಬೆಳಗಾವಿಯ ಈ ಅಮಾನವೀಯ ಘಟನೆ ಸಾಕ್ಷಿಯಾಗಿದೆ.
ಕಳೆದ 10 ವರ್ಷಗಳಿಂದ ಪೋಷಕರು ತಮ್ಮ ಸ್ವಂತ ಮಗಳನ್ನು ಕೈಗೆ ಸರಪಳಿ ಕಟ್ಟಿ ಗೃಹಬಂಧನದಲ್ಲಿಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಬಾನಾಮತಿ ಭಯದಿಂದ ಹೆತ್ತ ಮಗಳನ್ನೇ ತಂದೆ ಸಿದ್ರಾಯ ಗೃಹಬಂಧನದಲ್ಲಿಟ್ಟಿದ್ದಾರೆ. 10 ವರ್ಷಗಳ ಹಿಂದೆ ಸ್ನೇಹಾ ಎಲ್ಲರಂತೆ ಕಾಲೇಜಿಗೆ ಹೋಗುತ್ತಿದ್ದಳು. ಈ ವೇಳೆ ಯಾರೋ ಬಾನಾಮತಿ ಮಾಡಿದ್ದಾರೆ ಎಂದು ಕುಟುಂಬದವರು ನಂಬಿದ್ದಾರೆ. ಅದಾದ ಬಳಿಕ ಸ್ನೇಹಾ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದು, ಅಸಾಮಾನ್ಯವಾಗಿ ಕುಣಿಯುವುದು, ಅತಿರೇಕದ ಚಲನೆಗಳನ್ನು ಮಾಡುವುದು ಕಂಡುಬಂದಿದೆ.
ಮಗಳು ಅಸಹಜವಾಗಿ ವರ್ತಿಸುತ್ತಿದ್ದು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಗೃಹಬಂಧನದಲ್ಲಿಟ್ಟಿದ್ದೇವೆ ಎಂದು ತಂದೆ ತಿಳಿಸಿದ್ದಾರೆ. ಸ್ನೇಹಾಗೆ ಬಾನಾಮತಿ ಆಗಿದೆ ಎಂದು ಒಬ್ಬ ಸ್ವಾಮೀಜಿ ಹೇಳಿದ್ದಾಗಿ ಅವರು ತಿಳಿಸಿದ್ದಾರೆ. ಬಾನಾಮತಿ ತೆಗೆದುಹಾಕಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ ಎಂದ ಕಾರಣದಿಂದ ಚಿಕಿತ್ಸೆ ಪಡೆಯದೆ ಮನೆಯಲ್ಲೇ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ.
ಸರಪಳಿ ಬಿಡಿಸಿದರೆ ಕಲ್ಲು ಎಸೆಯುವುದು, ಹೊಡೆಯುವುದು, ಓಡಿ ಹೋಗುವುದು ಮಾಡುತ್ತಾಳೆ ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ. ಮೂವರು ಮಕ್ಕಳಲ್ಲಿ ಒಬ್ಬಳ ಸ್ಥಿತಿ ಹೀಗಾಗಿದೆ. ಅನಿವಾರ್ಯವಾಗಿ ಮಗಳನ್ನು ಗೃಹಬಂಧನದಲ್ಲಿಟ್ಟಿದ್ದೇವೆ ಎಂದು ತಂದೆ ಅಳಲು ವ್ಯಕ್ತಪಡಿಸಿದ್ದಾರೆ.
ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಸಮಾಜಕ್ಕೆ ಎಚ್ಚರಿಕೆಯಾಗಿದೆ. ಮಾನಸಿಕ ಆರೋಗ್ಯ ಸಮಸ್ಯೆಗೆ ಮನೋವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ನೀಡಬೇಕಾದಲ್ಲಿ, ಮೂಢನಂಬಿಕೆಯ ಹೆಸರಿನಲ್ಲಿ ಮಗಳನ್ನು ಸರಪಳಿಯಿಂದ ಕಟ್ಟಿಹಾಕಿ 10 ವರ್ಷಗಳಿಂದ ಗೃಹಬಂಧನದಲ್ಲಿಡುವುದು ದುರ್ಘಟನೆ ಎಂದು ಹೇಳಲಾಗುತ್ತಿದೆ









