ಬೆಳಗಾವಿ, ನ. 17: ಬೆಳಗಾವಿ ಜಿಲ್ಲೆ ಅನೇಕ ಮಹಾನ್ ತಪಸ್ವಿಗಳು ಹಾಗೂ ಜೈನ ಮುನಿಗಳ ತಪೋಭೂಮಿಯಾಗಿದ್ದು, ಬೆಳಗಾವಿ ಮತ್ತು ಶ್ರವಣಬೆಳಗೊಳದ ನಡುವಿನ ಧಾರ್ಮಿಕ ಸಂಬಂಧ ಅತ್ಯಂತ ಪುರಾತನವಾದುದು ಎಂದು ಶ್ರವಣಬೆಳಗೊಳದ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿಗಳು ಹೇಳಿದರು.
ಮೊದಲ ಬಾರಿಗೆ ಸೋಮವಾರ ಬೆಳಗಾವಿ ನಗರಕ್ಕೆ ಆಗಮಿಸಿದ ಸ್ವಾಮೀಜಿಗಳಿಗೆ ಜೈನ ಸಮಾಜದ ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಗೊಮ್ಮಟೇಶ ವಿದ್ಯಾ ಸಂಸ್ಥೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಶಾಂತಿಸಾಗರ ಮುನಿಮಹಾರಾಜರು, ಆಚಾರ್ಯ ದೇಶಭೂಷಣರು ಹಾಗೂ ಆಚಾರ್ಯ ವಿದ್ಯಾಸಾಗರ ಮುನಿಮಹಾರಾಜರು ಸೇರಿದಂತೆ ಅನೇಕ ಮಹಾನ್ ತಪಸ್ವಿಗಳಿಗೆ ಬೆಳಗಾವಿ ಜಿಲ್ಲೆ ನೆಲೆ ನೀಡಿದೆ. ಈ ಭಾಗದ ಜೈನ ಸಮಾಜವು ಧಾರ್ಮಿಕ ಪರಂಪರೆ ಹಾಗೂ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಸ್ಮರಿಸಿದರು.
ಬೆಳಗಾವಿ ಮತ್ತು ಶ್ರವಣಬೆಳಗೊಳದ ನಡುವಿನ ಸಂಬಂಧ ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿಲ್ಲ. ಪುರಾತನ ಕಾಲದಿಂದಲೂ ಉಭಯ ಪ್ರದೇಶಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಪರಸ್ಪರ ಬೆಸೆದುಕೊಂಡಿವೆ ಎಂದು ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ, ಶ್ರವಣಬೆಳಗೊಳವು ಜೈನ ಧರ್ಮದ ಪ್ರಮುಖ ಶ್ರದ್ಧಾಕೇಂದ್ರವಾಗಿದ್ದು, ಅಲ್ಲಿನ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಬೆಳಗಾವಿಯ ಜೈನ ಸಮಾಜ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಭಾರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ ಹನಮನ್ನವರ, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಹಾಗೂ ಉದ್ಯಮಿ ಸಚಿನ್ ಪಾಟೀಲ ಅವರನ್ನು ಸ್ವಾಮೀಜಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ವಕೀಲ ರವಿರಾಜ ಪಾಟೀಲ ಸೇರಿದಂತೆ ಜೈನ ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.