ಹೊಸದಿಲ್ಲಿ, ಮೇ 19 : ಅಗತ್ಯ ಔಷಧಿಗಳನ್ನು ಇಂದೇ ಖರೀದಿಸಿಕೊಳ್ಳಿ. ಇಲ್ಲವಾದರೆ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ದೇಶವ್ಯಾಪಿ ಬಂದ್‌ಗೆ ಕರೆ ನೀಡಿರುವ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ನಿರ್ಧಾರಕ್ಕೆ ಕರ್ನಾಟಕದ ಔಷಧ ವ್ಯಾಪಾರಿಗಳ ಸಂಘಟನೆಗಳೂ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಬುಧವಾರ ರಾಜ್ಯದಾದ್ಯಂತ ಮೆಡಿಕಲ್ ಅಂಗಡಿಗಳು ಬಂದ್ ಆಗಲಿವೆ.
ರಾಜ್ಯದಲ್ಲಿರುವ ಸುಮಾರು 26 ಸಾವಿರಕ್ಕೂ ಹೆಚ್ಚು ಮೆಡಿಕಲ್ ಅಂಗಡಿಗಳು ಹಾಗೂ ಬೆಂಗಳೂರಿನ 6,500ಕ್ಕೂ ಅಧಿಕ ಔಷಧಿ ಅಂಗಡಿಗಳು ನಾಳೆ ಬಾಗಿಲು ತೆರೆಯುವುದಿಲ್ಲ. ದೇಶಾದ್ಯಂತ ಸುಮಾರು 12 ಲಕ್ಷ ಔಷಧಿ ಅಂಗಡಿಗಳು ಹೋರಾಟದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಆನ್‌ಲೈನ್ ಮೂಲಕ ಔಷಧ ಮಾರಾಟ ಹೆಚ್ಚುತ್ತಿರುವುದರಿಂದ ಸಾಂಪ್ರದಾಯಿಕ ಮೆಡಿಕಲ್ ಅಂಗಡಿಗಳಿಗೆ ಭಾರೀ ಹೊಡೆತ ಬಿದ್ದಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ವಿವಿಧ ಆಪ್‌ಗಳು ಹಾಗೂ ಇ-ಫಾರ್ಮಸಿ ಮೂಲಕ ಔಷಧ ವಿತರಣೆ ಹೆಚ್ಚುತ್ತಿರುವುದನ್ನು ಸಂಘಟನೆಗಳು ವಿರೋಧಿಸಿವೆ.
ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧ ಮಾರಾಟವಾಗುತ್ತಿರುವುದು, ನಕಲಿ ಔಷಧಿಗಳ ಭೀತಿ, ಆಂಟಿಬಯೋಟಿಕ್ ದುರುಪಯೋಗ ಹಾಗೂ ನಿಯಂತ್ರಣರಹಿತ ಇ-ಫಾರ್ಮಸಿ ವ್ಯವಸ್ಥೆಯಿಂದ ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅಕ್ರಮ ಇ-ಫಾರ್ಮಸಿಗಳನ್ನು ಬಂದ್ ಮಾಡಬೇಕು, ಅತಿಯಾದ ರಿಯಾಯಿತಿ ನೀತಿಗೆ ಕಡಿವಾಣ ಹಾಕಬೇಕು ಹಾಗೂ ಸಣ್ಣ ಔಷಧ ವ್ಯಾಪಾರಿಗಳನ್ನು ರಕ್ಷಿಸಬೇಕು ಎಂಬುದು ಪ್ರಮುಖ ಬೇಡಿಕೆ ಎಂದು ಕರ್ನಾಟಕ ಸ್ಟೇಟ್ ಡ್ರಗ್ಗಿಸ್ಟ್ ಅಂಡ್ ಕೆಮಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ರಘುನಾಥ್ ರೆಡ್ಡಿ ತಿಳಿಸಿದ್ದಾರೆ.
ಇದು ಸಾರ್ವಜನಿಕರಿಗೆ ತೊಂದರೆ ನೀಡಲು ನಡೆಸುತ್ತಿರುವ ಹೋರಾಟವಲ್ಲ. ಆನ್‌ಲೈನ್ ಔಷಧ ವ್ಯಾಪಾರದಿಂದ ಸಾವಿರಾರು ಮೆಡಿಕಲ್ ಅಂಗಡಿಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹಕ್ಕುಗಳಿಗಾಗಿ ಅನಿವಾರ್ಯವಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.