ಬೆಂಗಳೂರು, ನ. 9: ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ನಡೆಸಿರುವ ಪರೀಕ್ಷಾ ವರದಿಗೆ ಬದ್ಧವಾಗಿದ್ದೇವೆ. ಈ ಕುರಿತು ಕೇಂದ್ರ ಸರಕಾರವೇ ನೇರವಾಗಿ ಸ್ಪಷ್ಟನೆ ನೀಡಬೇಕು ಎಂದು ಸಚಿವ ರಿಝ್ವಾನ ಅರ್ಷದ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ವಾಹನಗಳ ಸುರಕ್ಷತೆ ಹಾಗೂ ಗ್ರಾಹಕರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಪರೀಕ್ಷೆ ನಡೆಸಲಾಗಿದೆ. ಆದರೆ, ಕೇಂದ್ರ ಸರಕಾರ ನೇರವಾಗಿ ಉತ್ತರಿಸುವ ಬದಲು ತೈಲ ಕಂಪನಿಗಳ ಮೂಲಕ ಪ್ರತಿಕ್ರಿಯೆ ನೀಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೆಪ್ಟೆಂಬರ್ 21ರಿಂದ ಅಕ್ಟೋಬರ್ವರೆಗೆ ರಾಜ್ಯದ ವಿವಿಧ ಪೆಟ್ರೋಲ್ ಬಂಕ್ಗಳಿಂದ 63 ಮಾದರಿಗಳನ್ನು ನಿಯಮಾನುಸಾರ ಸಂಗ್ರಹಿಸಿ, ಮಾನ್ಯತೆ ಪಡೆದ ಸ್ವತಂತ್ರ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ. ಈ ಪ್ರಕ್ರಿಯೆಯ ಎಲ್ಲ ದಾಖಲೆಗಳು ಸರಕಾರದ ಬಳಿ ಇವೆ. ವರದಿಯನ್ನು ಪ್ರಶ್ನಿಸುವುದಾದರೆ ವೈಜ್ಞಾನಿಕ ಆಧಾರಗಳೊಂದಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಎಥೆನಾಲ್ ಮಿಶ್ರಣವು ತೈಲ ಕಂಪನಿಗಳ ನಿಯಂತ್ರಣದಲ್ಲಿರುವ ಪ್ರಕ್ರಿಯೆಯಾಗಿದೆ. ಹೀಗಿರುವಾಗ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಿಶ್ರಣ ಕಂಡುಬಂದರೆ ಅದರ ಜವಾಬ್ದಾರಿಯನ್ನು ಪೆಟ್ರೋಲ್ ಬಂಕ್ ಮಾಲಕರ ಮೇಲೆ ಹೊರಿಸುವುದು ಸರಿಯಲ್ಲ. ತೈಲ ಕಂಪನಿಗಳೇ ಸ್ಪಷ್ಟನೆ ನೀಡಬೇಕು ಎಂದರು.
ಶೇ. 20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್ಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ವಾಹನ ತಯಾರಿಕಾ ಸಂಸ್ಥೆಗಳು ವ್ಯಕ್ತಪಡಿಸಿರುವ ಆತಂಕವನ್ನೂ ಸಚಿವರು ಪ್ರಸ್ತಾಪಿಸಿದರು.
ರಾಜ್ಯ ಸರಕಾರ ಎಥೆನಾಲ್ ಮಿಶ್ರಣವನ್ನು ವಿರೋಧಿಸುತ್ತಿಲ್ಲ. ಆದರೆ, ಗ್ರಾಹಕರಿಗೆ ಶೇ. 10 ಹಾಗೂ ಶೇ. 20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಮತ್ತು ಎಥೆನಾಲ್ ಬೆರೆಸದ ಪೆಟ್ರೋಲ್ ಖರೀದಿಸುವ ಆಯ್ಕೆ ಇರಬೇಕು. ತಮ್ಮ ವಾಹನದ ಸಾಮರ್ಥ್ಯಕ್ಕೆ ಅನುಗುಣವಾಗಿ ಇಂಧನ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಗ್ರಾಹಕರಿಗೆ ನೀಡಬೇಕು ಎಂದು ಆಗ್ರಹಿಸಿದರು.
ವಾಹನಗಳ ಸುರಕ್ಷತೆ ಹಾಗೂ ಗ್ರಾಹಕರ ಹಿತಾಸಕ್ತಿಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ರಾಜ್ಯ ಸರಕಾರದ ಪರೀಕ್ಷಾ ವರದಿಗೆ ಕೇಂದ್ರ ಸರಕಾರ ಮತ್ತು ತೈಲ ಕಂಪನಿಗಳು ವೈಜ್ಞಾನಿಕ ಆಧಾರಗಳೊಂದಿಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ರಿಝ್ವಾನ್ ಅರ್ಷದ್ ಒತ್ತಾಯಿಸಿದರು.