ಬೆಳಗಾವಿ, ಮೇ 22 : ನಗರದ ಮಂಡೋಲಿ ರಸ್ತೆಯಲ್ಲಿನ ನಿವಾಸದಲ್ಲಿ ಖ್ಯಾತ ವೈದ್ಯ ಡಾ. ದಿನೇಶ ಲಕ್ಷ್ಮಣ ಭಟ್ಕಳ (79) ಅವರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಘಟನೆ ವೈದ್ಯ ವಲಯದಲ್ಲಿ ಹಾಗೂ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರಾದ ಡಾ. ಭಟ್ಕಳ ಅವರು ಕಳೆದ 4 ದಶಕಗಳಿಂದ ಕೆಎಲ್ಇ ಸಂಸ್ಥೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದರು. ಅಂಕೋಲಾದ ಕೆಎಲ್ಇ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದ ಅವರು, ಬಳಿಕ ಬೆಳಗಾವಿಯಲ್ಲಿ ನೆಲೆಸಿ ಕೆಎಲ್ಇ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಸರಳ ಜೀವನ ಶೈಲಿ, ರೋಗಿಗಳೊಂದಿಗೆ ಆತ್ಮೀಯ ನಡೆ ಹಾಗೂ ಸೇವಾ ಮನೋಭಾವದಿಂದ ಅವರು ವೈದ್ಯ ವಲಯದಲ್ಲಿ ವಿಶೇಷ ಗೌರವ ಪಡೆದಿದ್ದರು. ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಅವರು ಸಮಾಜದಲ್ಲಿಯೂ ಸ್ನೇಹಪರ ವ್ಯಕ್ತಿತ್ವದಿಂದ ಪರಿಚಿತರಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇತ್ತೀಚಿನ ಕೆಲವು ವರ್ಷಗಳಿಂದ ಅವರು ಶ್ವಾಸಕೋಶ ಕ್ಯಾನ್ಸರನಿಂದ ಬಳಲುತ್ತಿದ್ದರು ಎನ್ನಲಾಗಿದೆ. ತೀವ್ರ ಎದೆನೋವಿನಿಂದ ಮಾನಸಿಕವಾಗಿ ನೊಂದಿದ್ದ ಹಿನ್ನೆಲೆ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಆತ್ಮಹತ್ಯೆಗೆ ಮುನ್ನ ಕೆಎಲ್ಇ ಸಂಸ್ಥೆಯ ಮುಖ್ಯಸ್ಥ ಡಾ. ಪ್ರಭಾಕರ ಕೋರೆ ಅವರಿಗೆ ವಾಟ್ಸಪ್ ಸಂದೇಶ ಕಳುಹಿಸಿರುವ ಮಾಹಿತಿ ಲಭ್ಯವಾಗಿದೆ. ನಾನು ತೀವ್ರ ಎದೆನೋವಿನಿಂದ ಬಳಲುತ್ತಿದ್ದೇನೆ. ಆದ್ದರಿಂದ ಈ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಮಾಡಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿ ಎಂದು ಸಂದೇಶದಲ್ಲಿ ಉಲ್ಲೇಖಿಸಿದ್ದರು. ತಮಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಕೇರೂರ ಅವರಿಗೂ ಅವರು ಸಂದೇಶ ಕಳುಹಿಸಿದ್ದಾಗಿ ತಿಳಿದು ಬಂದಿದೆ.
ಶುಕ್ರವಾರ ಬೆಳಿಗ್ಗೆ ತಮ್ಮ ಮನೆಯ ಬಾಲ್ಕನಿಯಲ್ಲಿ ತಾವೇ ತಮ್ಮ ಮೇಲೆ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ಸದ್ದು ಕೇಳಿ ಮನೆಯವರು ಹಾಗೂ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಿಲಕವಾಡಿ ಠಾಣೆ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸ್ಥಳದಲ್ಲಿದ್ದ ಶಸ್ತ್ರಾಸ್ತ್ರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.