ಬೆಂಗಳೂರು, ಸೆ. 15 : ಆಹಾರ ಇಲಾಖೆಯ ಇ-ಕೆವೈಸಿ ಪ್ರಕ್ರಿಯೆ ವೇಳೆ ಪದೇಪದೇ ಎದುರಾಗುತ್ತಿರುವ ಸರ್ವರ್ ಹಾಗೂ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರವಾಗಿ ಶೀಘ್ರವೇ ಹೊಸ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗುವುದು. ಇದರಿಂದ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಿಗೆ ತೆರಳದೆ ಮನೆಯಿಂದಲೇ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ಆಹಾರ ಸಚಿವ ರಿಝ್ವಾನ್ ಅರ್ಶದ್ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು, ಇಲಾಖೆಯ ಸರ್ವರ್‌ನಲ್ಲಿ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳಿಗೆ ತೆರಳುವುದನ್ನು ತಪ್ಪಿಸಲು ಮೊಬೈಲ್ ಮೂಲಕ ಮುಖ ದೃಢೀಕರಣ ಬಳಸಿ ಇ-ಕೆವೈಸಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ವಿತರಣಾ ನಿರ್ದೇಶನಾಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಹೊಸ ಆ್ಯಪ್ ಅನ್ನು ಇನ್ನೊಂದು ವಾರದೊಳಗೆ ಸಾರ್ವಜನಿಕರ ಬಳಕೆಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಇ-ಕೆವೈಸಿ ಮಾಡಿಸಬೇಕಿರುವ ಒಟ್ಟು 2,67,64,276 ಫಲಾನುಭವಿಗಳ ಪೈಕಿ 97,54,197 ಮಂದಿ ಇದುವರೆಗೆ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಶೇ.37ರಷ್ಟು ಪ್ರಗತಿಯಾಗಿದೆ. ಪ್ರತಿದಿನ ಸರಾಸರಿ 5.40 ಲಕ್ಷ ಫಲಾನುಭವಿಗಳು ಇ-ಕೆವೈಸಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಆಹಾರ ಇಲಾಖೆಯ ಸರ್ವರ್ ಸಮಸ್ಯೆ ಹಿಂದಿನಿಂದಲೂ ಇದ್ದು, ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರತ್ಯೇಕ ಏಜೆನ್ಸಿಯನ್ನು ನೇಮಿಸಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಇಲಾಖೆಯ ಸರ್ವರ್ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯನ್ನೂ ಪರಿಶೀಲಿಸಲಾಗುತ್ತಿದೆ ಎಂದರು.
ಮುಂದಿನ ಒಂದು ತಿಂಗಳೊಳಗೆ ಸರ್ವರ್ ಹಾಗೂ ತಾಂತ್ರಿಕ ವ್ಯವಸ್ಥೆಯಲ್ಲಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಸರಳ, ವೇಗ ಮತ್ತು ಪರಿಣಾಮಕಾರಿಯಾಗಿ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ರಿಝ್ವಾನ್ ಅರ್ಶದ್ ಹೇಳಿದರು.