ಹೊಸದಿಲ್ಲಿ, ನ. 23: 2002ರ ಗೋಧ್ರಾ ರೈಲು ದಹನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಇರ್ಫಾನ್ ಸಿರಾಜ್ ಪಡಾ ಅವರಿಗೆ ಸುಪ್ರೀಂ ಕೋರ್ಟ ಸೋಮವಾರ ಅನಾರೋಗ್ಯದ ಕಾರಣದಿಂದ ಜಾಮೀನು ಮಂಜೂರು ಮಾಡಿದೆ. ಅವರ ಜೀವಾವಧಿ ಶಿಕ್ಷೆಯ ಜಾರಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ಪೀಠ, ಪಡಾ ಅವರ ಗಂಭೀರ ಹೃದಯ ಸಂಬಂಧಿ ಅನಾರೋಗ್ಯ ಹಾಗೂ 18 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿರುವುದನ್ನು ಪರಿಗಣಿಸಿ ಈ ಆದೇಶ ನೀಡಿದೆ.
ಪಡಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದನ್ನು ಗುಜರಾತ್ ಸರ್ಕಾರವೂ ಒಪ್ಪಿಕೊಂಡಿದೆ. ಪ್ರಕರಣ ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದರೂ, ವೈದ್ಯಕೀಯ ಕಾರಣಗಳ ಆಧಾರದಲ್ಲಿ ಶಿಕ್ಷೆಯ ಜಾರಿಯನ್ನು ಅಮಾನತುಗೊಳಿಸುವುದಕ್ಕೆ ಸರ್ಕಾರದ ಪರ ವಕೀಲೆ ಸ್ವಾತಿ ಘಿಲ್ಡಿಯಾಲ್ ಆಕ್ಷೇಪ ವ್ಯಕ್ತಪಡಿಸಲಿಲ್ಲ.
ಅರ್ಜಿದಾರರ ಪರ ವಕೀಲರು ವಿವರಿಸಿರುವ ಆರೋಗ್ಯ ಸಮಸ್ಯೆಗಳು ವಾಸ್ತವವಾಗಿವೆ ಎಂಬುದನ್ನು ಸರ್ಕಾರದ ಪರ ವಕೀಲರೂ ದೃಢಪಡಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಶಿಕ್ಷೆಯ ಜಾರಿಯನ್ನು ಅಮಾನತುಗೊಳಿಸುವುದು ಸೂಕ್ತ ಎಂದು ಪೀಠ ಅಭಿಪ್ರಾಯಪಟ್ಟಿದೆ.
ವಿಚಾರಣಾ ನ್ಯಾಯಾಲಯ ವಿಧಿಸುವ ಷರತ್ತುಗಳಿಗೆ ಒಳಪಟ್ಟು ಪಡಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ಆದೇಶವು ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದಂತಲ್ಲ. ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಸುಪ್ರೀಂ ಕೋರ್ಟನಲ್ಲಿ ಇನ್ನೂ ವಿಚಾರಣೆಗೆ ಬಾಕಿಯಿದೆ.
59 ಮಂದಿಯ ಸಾವಿಗೆ ಕಾರಣವಾಗಿದ್ದ ಘಟನೆ
2002ರ ಫೆಬ್ರವರಿ 27ರಂದು ಗುಜರಾತ್ನ ಗೋಧ್ರಾ ರೈಲು ನಿಲ್ದಾಣದ ಬಳಿ ಸಬರಮತಿ ಎಕ್ಸ್ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ ಘಟನೆಯಲ್ಲಿ ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ ಕರಸೇವಕರು ಸೇರಿದಂತೆ 59 ಮಂದಿ ಮೃತಪಟ್ಟಿದ್ದರು. ಈ ಘಟನೆಯ ಬೆನ್ನಲ್ಲೇ ಗುಜರಾತ್ನಾದ್ಯಂತ ವ್ಯಾಪಕ ಕೋಮು ಹಿಂಸಾಚಾರ ಭುಗಿಲೆದ್ದಿತ್ತು.
2011ರ ಮಾರ್ಚ್ನಲ್ಲಿ ವಿಶೇಷ ನ್ಯಾಯಾಲಯವು ಪ್ರಕರಣದ 31 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು. ಅವರಲ್ಲಿ 11 ಮಂದಿಗೆ ಮರಣದಂಡನೆ ಹಾಗೂ ಉಳಿದ 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
2017ರಲ್ಲಿ ಗುಜರಾತ್ ಹೈಕೋರ್ಟ 11 ಮಂದಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತ್ತು. ಉಳಿದ 20 ಮಂದಿಯ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಈ ತೀರ್ಪುಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳು ಸುಪ್ರೀಂ ಕೋರ್ಟನಲ್ಲಿ ವಿಚಾರಣೆಗೆ ಬಾಕಿಯಿವೆ.
ಇದಕ್ಕೂ ಮೊದಲು ಇದೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಕೆಲವರಿಗೆ ದೀರ್ಘಕಾಲದ ಜೈಲುವಾಸ, ಅನಾರೋಗ್ಯ ಹಾಗೂ ಕುಟುಂಬದ ತುರ್ತು ಪರಿಸ್ಥಿತಿಗಳ ಆಧಾರದಲ್ಲಿ ಸುಪ್ರೀಂ ಕೋರ್ಟ ತಾತ್ಕಾಲಿಕ ಪರಿಹಾರ ನೀಡಿತ್ತು.
ಇತ್ತೀಚೆಗೆ 2002ರ ಗುಜರಾತ್ ಕೋಮು ಹಿಂಸಾಚಾರದ ಸಂದರ್ಭದಲ್ಲಿ ನಡೆದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯ ಜಾರಿಯನ್ನೂ ಸುಪ್ರೀಂ ಕೋರ್ಟ ಅಮಾನತುಗೊಳಿಸಿತ್ತು.