ಬೆಂಗಳೂರು, ಮೇ 8 : ಸವಾಲಿನ ಪರಿಸ್ಥಿತಿಯಲ್ಲಿಯೂ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಹೆಚ್ಚಿನ ಕಾಳಜಿ ವಹಿಸಿ ಭದ್ರತೆ ಒದಗಿಸಿತ್ತು. ಇಂತಹ ಸಂದರ್ಭದಲ್ಲೂ ಫೈನಲ್ ಪಂದ್ಯವನ್ನು ಗುಜರಾತಿಗೆ ಸ್ಥಳಾಂತರಿಸುವುದು ಸರಿಯಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕರು ಟಿಕೆಟ್ ಕೇಳಿದ್ದಕ್ಕಾಗಿ ಪಂದ್ಯಾವಳಿಯನ್ನು ಸ್ಥಳಾಂತರಿಸಲಾಗಿದೆ ಎಂಬ ಆರೋಪ ಸಂಪೂರ್ಣ ಆಧಾರರಹಿತವಾಗಿದೆ. ಈ ಕುರಿತು ಐಪಿಎಲ್ ಅಥವಾ ಕೆಸಿಎ ಅಧಿಕಾರಿಗಳು ನೇರವಾಗಿ ಹೇಳಿಕೆ ನೀಡಲಿ ಎಂದು ಸವಾಲು ಹಾಕಿದರು.
ಬಿಸಿಸಿಐ, ಕೆಸಿಎ ಹಾಗೂ ಆರ್‌ಸಿಬಿ ಸಂಸ್ಥೆಗಳ ನಡುವಿನ ಒಪ್ಪಂದಗಳ ಬಗ್ಗೆ ಮಾಹಿತಿ ಇಲ್ಲ. ಆದರೆ ಐಪಿಎಲ್ ಪಂದ್ಯಾವಳಿಯನ್ನು ಲಾಭದ ದೃಷ್ಟಿಯಿಂದಲೇ ನೋಡಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು ಕ್ರೀಡಾಂಗಣದಲ್ಲಿ 33 ಸಾವಿರ ಆಸನಗಳಿದ್ದು, ಕೆಲ ಉಚಿತ ಟಿಕೆಟ್‌ಗಳನ್ನು ಹೊರತುಪಡಿಸಿದರೆ ಭದ್ರತೆ ಅಥವಾ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗಿಲ್ಲ. ಪೊಲೀಸ್ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಿದೆ. ಕಳೆದ ವರ್ಷದಂತಹ ದುರಂತಗಳು ಮರುಕಳಿಸಬಾರದು ಎಂಬ ಕಾರಣಕ್ಕೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗಿತ್ತು ಎಂದು ತಿಳಿಸಿದರು.
ಐಪಿಎಲ್ ಪಂದ್ಯಗಳು ಬೆಂಗಳೂರಿನಿಂದ ಸ್ಥಳಾಂತರವಾಗಬಾರದು ಎಂಬ ಉದ್ದೇಶದಿಂದಲೇ ಸಂಕಷ್ಟದ ಸಂದರ್ಭದಲ್ಲೂ ಅನುಮತಿ ನೀಡಲಾಗಿತ್ತು. ನ್ಯಾಯಮೂರ್ತಿ ಮೈಕಲ್ ಖುನ್ನಾ ವರದಿ ಪ್ರಕಾರ ಕೈಗೊಳ್ಳಬೇಕಿದ್ದ ಅಲ್ಪಾವಧಿ ಕ್ರಮಗಳನ್ನು ತ್ವರಿತವಾಗಿ ಜಾರಿಗೊಳಿಸಿ ಪಂದ್ಯಾವಳಿ ನಡೆಸಲು ಅವಕಾಶ ಮಾಡಿಕೊಡಲಾಗಿತ್ತು ಎಂದರು.
ಈಗ ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ 1 ಲಕ್ಷ ಆಸನಗಳಿರುವ ಕಾರಣ ಹೆಚ್ಚಿನ ಲಾಭಕ್ಕಾಗಿ ಪಂದ್ಯವನ್ನು ಸ್ಥಳಾಂತರಿಸಲಾಗುತ್ತಿದೆ. ಇದಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸೇರಿ ಸುಮಾರು 300 ಶಾಸಕರಿದ್ದಾರೆ. ಒಬ್ಬರಿಗೆ 2 ಟಿಕೆಟ್ ನೀಡಿದರೂ ಒಟ್ಟು 600 ಟಿಕೆಟ್ ಮಾತ್ರವಾಗುತ್ತದೆ. ಇದನ್ನೇ ಕಾರಣವನ್ನಾಗಿ ಮಾಡಿ ಪಂದ್ಯ ಸ್ಥಳಾಂತರಿಸಲಾಗಿದೆ ಎಂದು ಹೇಳುವುದಾದರೆ ಅವರು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.
ಆರ್‌ಸಿಬಿ ಯಾರಿಗೆ ಟಿಕೆಟ್ ನೀಡಿದೆ, ಎದುರಾಳಿ ತಂಡ ಸಿಎಸ್‌ಕೆ ಯಾರಿಗೆ ಟಿಕೆಟ್ ನೀಡಿದೆ ಎಂಬುದನ್ನೂ ಬಹಿರಂಗಪಡಿಸಲಿ. ಶಾಸಕರಿಗೆ ಟಿಕೆಟ್ ನೀಡುವ ಕಾರಣಕ್ಕೆ ಪಂದ್ಯಾವಳಿ ಸ್ಥಳಾಂತರವಾಗಿಲ್ಲ ಎಂದು ಪುನರುಚ್ಚರಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಟೀಕೆ ಮಾಡಬಹುದು. ಆದರೆ ಅವರ ಆಡಳಿತಾವಧಿಯಲ್ಲಿ ಕ್ರೀಡೆಗೆ ಎಷ್ಟು ಪ್ರೋತ್ಸಾಹ ನೀಡಲಾಗುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.
ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಕುರಿತೂ ಪ್ರತಿಕ್ರಿಯಿಸಿದ ಅವರು, ಟಿವಿಕೆಗೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡದಿರುವುದು ಸರಿಯಲ್ಲ. ಈಗಾಗಲೇ ಇಂತಹ ಹಲವು ಪ್ರಕರಣಗಳಲ್ಲಿ ಸಂವಿಧಾನಾತ್ಮಕ ಸಂಪ್ರದಾಯಗಳು ರೂಪಗೊಂಡಿವೆ. ರಾಜ್ಯಪಾಲರು ಪಕ್ಷಾತೀತವಾಗಿ ನಡೆದುಕೊಳ್ಳಬೇಕು. ಒಂದು ವೇಳೆ ಪಕ್ಷಪಾತ ಕಂಡುಬಂದರೆ ಟಿವಿಕೆ ಮುಖಂಡರು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಹೇಳಿದರು.