ಬೆಂಗಳೂರು, ಅ. 29: ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಅಪಹರಿಸಿ ₹10 ಲಕ್ಷಕ್ಕೆ ಬೇಡಿಕೆಯಿಟ್ಟ ಪ್ರಕರಣವನ್ನು ಮಾರತಹಳ್ಳಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಅಪಹರಣ ಪ್ರಕರಣದಲ್ಲಿ ಸಂತ್ರಸ್ತ ಯುವತಿ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದ್ದು, ಅತ್ಯಾಚಾರ ಆರೋಪದಡಿ ಅಪಹರಣದಿಂದ ರಕ್ಷಿಸಲ್ಪಟ್ಟ ಇಬ್ಬರು ಯುವಕರನ್ನೂ ಬಂಧಿಸಲಾಗಿದೆ.
ಅಕ್ಟೋಬರ್ 28ರಂದು ತನ್ನ ಮಗ ಬುರ್ಸು ಮಹೇಂದ್ರ (23) ಹಾಗೂ ಆತನ ಸ್ನೇಹಿತ ಯೆರ್ರಿಬೋನಿ ತರುಣ (23) ಅವರನ್ನು ಅಪರಿಚಿತರು ಅಪಹರಿಸಿ ₹10 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಮಹೇಂದ್ರನ ತಂದೆ ಮಾರತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಕೇವಲ 6 ಗಂಟೆಗಳಲ್ಲಿ ಅಪಹರಣಕಾರರನ್ನು ಪತ್ತೆಹಚ್ಚಿದ್ದಾರೆ.
ಪೊಲೀಸರ ಪ್ರಕಾರ, ಆಂಧ್ರಪ್ರದೇಶ ಮೂಲದ ಮಹೇಂದ್ರ, ತರುಣ ಹಾಗೂ ಮಂಜುನಾಥ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದಾರೆ. ಕೆಲದಿನಗಳ ಹಿಂದೆ ಮಂಜುನಾಥ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಆತನ ಸ್ನೇಹಿತ ರಾಜಕುಮಾರ ತನ್ನ ಪ್ರೇಯಸಿಯೊಂದಿಗೆ ಮನೆಗೆ ಬಂದಿದ್ದರು.
ಆ ಸಂದರ್ಭದಲ್ಲಿ ಮದ್ಯದ ಅಮಲಿನಲ್ಲಿದ್ದ ಮಹೇಂದ್ರ, ರಾಜಕುಮಾರ ಅವರನ್ನು ಪ್ರತ್ಯೇಕವಾಗಿ ಕೂಡಿ ಹಾಕಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ಆಕ್ರೋಶಗೊಂಡ ಯುವತಿ ತನ್ನ ಪ್ರಿಯಕರ ರಾಜಕುಮಾರ, ಸ್ನೇಹಿತ ಮಂಜುನಾಥ ಹಾಗೂ ಇತರರೊಂದಿಗೆ ಸೇರಿ ಮಹೇಂದ್ರ ಮತ್ತು ತರುಣ ಅವರನ್ನು ಅಪಹರಿಸಲು ಸಂಚು ರೂಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದರಂತೆ ಇಬ್ಬರನ್ನು ಅಪಹರಿಸಿ ಕುಟುಂಬದವರಿಗೆ ಕರೆ ಮಾಡಿ ₹10 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಹಣ ಪಡೆದ ನಂತರವೂ ಅಪಹೃತರನ್ನು ಬಿಡುಗಡೆ ಮಾಡದೆ ಕೊಲೆ ಮಾಡಲು ಆರೋಪಿಗಳು ಯೋಜಿಸಿದ್ದರು ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಆದರೆ, ದೂರು ದಾಖಲಾದ 6 ಗಂಟೆಗಳಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಿಸಿ, ಯುವತಿ ಸೇರಿದಂತೆ 10 ಮಂದಿ ಅಪಹರಣ ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅತ್ಯಾಚಾರ ಆರೋಪವೂ ಬೆಳಕಿಗೆ ಬಂದಿದ್ದು, ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿ ಮಹೇಂದ್ರ ಮತ್ತು ತರುಣ್ ಅವರನ್ನು ಬಂಧಿಸಲಾಗಿದೆ. ಅತ್ಯಾಚಾರ ಮತ್ತು ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 12 ಮಂದಿಯನ್ನು ಬಂಧಿಸಲಾಗಿದ್ದು, ಎರಡೂ ಪ್ರಕರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.