ಕೊಪ್ಪಳ, ಮೇ 15 : ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಪಲ್ಟಿಯಾಗಿ ಕೆಳಗೆ ಬಿದ್ದ ಪರಿಣಾಮ ಒಂದೇ ಕುಟುಂಬದ 6 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಮೃತರನ್ನು ಕೆಂಚಪ್ಪ (35), ಮಹಾಂತೇಶ (18), ಭರತ (1), ಸವಿತಾ (12), ಮಾರೇಶ ಹಾಗೂ ಗೌರಮ್ಮ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯಶವಂತನಗರ ನಿವಾಸಿಗಳಾಗಿದ್ದಾರೆ ಎನ್ನಲಾಗಿದೆ. ಇವರು ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 16 ಮಂದಿ ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್‌ಗೆ ವೇಗವಾಗಿ ಬಂದ ಟ್ಯಾಂಕರ್ ಲಾರಿ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸೇತುವೆಯಿಂದ ಕೆಳಭಾಗಕ್ಕೆ ಬಿದ್ದಿದೆ. ಅಪಘಾತದ ನಂತರ ಟ್ಯಾಂಕರ್ ಲಾರಿಯೂ ಸಹ ಕೆಳಕ್ಕೆ ಉರುಳಿದೆ ಎಂದು ತಿಳಿದು ಬಂದಿದೆ.
ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳದಲ್ಲಿ ಭಾರೀ ಗೊಂದಲ ಉಂಟಾಗಿದ್ದು, ಗಾಯಾಳುಗಳ ಕಿರುಚಾಟ ಮರ್ಮಭೇದಿಯಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಹೊರತೆಗೆದರು.
ಗಾಯಗೊಂಡವರನ್ನು ಹೊಸಪೇಟೆ ಹಾಗೂ ಕೊಪ್ಪಳ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಇದರಿಂದ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.