ಹೊಸದಿಲ್ಲಿ, ಮೇ 14 : ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಮೂರನೇ ಹಂತವನ್ನು ಚುನಾವಣಾ ಆಯೋಗ ಗುರುವಾರ ಅಧಿಕೃತವಾಗಿ ಘೋಷಿಸಿದೆ. ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಹೊರತುಪಡಿಸಿ ದೇಶದ ಬಹುತೇಕ ಭಾಗಗಳನ್ನು ಈ ಹಂತದಲ್ಲಿ ಒಳಗೊಂಡಿದ್ದು, ಸುಮಾರು 36.73 ಕೋಟಿ ಮತದಾರರ ಮಾಹಿತಿಯನ್ನು ಮನೆ ಮನೆಗೆ ತೆರಳಿ ಪರಿಶೀಲಿಸುವ ಮಹತ್ವದ ಅಭಿಯಾನ ಇದಾಗಿದೆ.
ಈ ಹಂತದಲ್ಲಿ ದೇಶಾದ್ಯಂತ 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ. ಇವರಿಗೆ ರಾಜಕೀಯ ಪಕ್ಷಗಳು ನೇಮಿಸಿರುವ 3.42 ಲಕ್ಷ ಬೂತ್ ಮಟ್ಟದ ಏಜೆಂಟರು ಸಹಕರಿಸಲಿದ್ದಾರೆ. ಮತದಾರರ ಪಟ್ಟಿಯನ್ನು ದೋಷರಹಿತಗೊಳಿಸುವುದು, ನಕಲಿ ಮತ್ತು ಅನರ್ಹ ಹೆಸರುಗಳನ್ನು ತೆಗೆದುಹಾಕುವುದು ಹಾಗೂ ಅರ್ಹ ನಾಗರಿಕರ ಹೆಸರು ಸೇರ್ಪಡೆ ಮಾಡುವುದು ಈ ಪರಿಷ್ಕರಣೆಯ ಪ್ರಮುಖ ಉದ್ದೇಶವಾಗಿದೆ.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಹರಿಯಾಣ, ಪಂಜಾಬ್, ಒಡಿಶಾ, ಜಾರ್ಖಂಡ್, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಜೊತೆಗೆ ದೆಹಲಿ, ಚಂಡೀಗಢ ಹಾಗೂ ದಾದ್ರಾ ಮತ್ತು ನಗರ ಹವೇಲಿ-ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳನ್ನೂ ಒಳಗೊಂಡಿದೆ.
ಮೂರನೇ ಹಂತದ ಅಭಿಯಾನ ಆರಂಭಿಸಿರುವ ಕುರಿತು ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಮತದಾರರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಪ್ರಜಾಪ್ರಭುತ್ವದ ಬಲವಾದ ವ್ಯವಸ್ಥೆಗೆ ನಿಖರ ಮತ್ತು ವಿಶ್ವಾಸಾರ್ಹ ಮತದಾರರ ಪಟ್ಟಿ ಅತ್ಯಗತ್ಯವಾಗಿದೆ. ಅರ್ಹ ನಾಗರಿಕರ ಹೆಸರು ಉಳಿದುಕೊಳ್ಳಬೇಕು ಮತ್ತು ಅನರ್ಹ ಹೆಸರುಗಳು ತೆಗೆದುಹಾಕಲ್ಪಡಬೇಕು ಎಂಬುದೇ ಈ ಅಭಿಯಾನದ ಉದ್ದೇಶ ಎಂದು ಹೇಳಿದರು.
ಜನಗಣತಿಯ ಮನೆ ಪಟ್ಟಿ ಕಾರ್ಯ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಈ ವೇಳಾಪಟ್ಟಿಯನ್ನು ರೂಪಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಹಿಮಪಾತ, ಕಠಿಣ ಭೂಪ್ರದೇಶ ಮತ್ತು ಕಾರ್ಯಾಚರಣಾ ಸವಾಲುಗಳ ಕಾರಣದಿಂದ ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಈ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಅಲ್ಲಿನ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಪ್ರತ್ಯೇಕ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಮೇ ತಿಂಗಳಿಂದ ಸೆಪ್ಟೆಂಬರ್‌ವರೆಗೆ ವಿವಿಧ ಹಂತಗಳಲ್ಲಿ ನಡೆಯಲಿದೆ. ಮನೆ-ಮನೆಗೆ ಪರಿಶೀಲನೆ, ಮತಗಟ್ಟೆಗಳ ಮರುಸಂಘಟನೆ, ಕರಡು ಮತದಾರರ ಪಟ್ಟಿ ಪ್ರಕಟಣೆ, ಆಕ್ಷೇಪಣೆ ಸಲ್ಲಿಕೆ, ಹೊಸ ಹೆಸರು ಸೇರ್ಪಡೆ ಮತ್ತು ಅಂತಿಮ ಪಟ್ಟಿ ಪ್ರಕಟಣೆ ಸೇರಿದಂತೆ ಹಲವು ಹಂತಗಳನ್ನು ಒಳಗೊಂಡಿದೆ.
ಮೊದಲ ಹಂತದಲ್ಲಿ ಒಡಿಶಾ, ಮಿಜೋರಾಂ, ಸಿಕ್ಕಿಂ ಮತ್ತು ಮಣಿಪುರ ರಾಜ್ಯಗಳಲ್ಲಿ ಮೇ 30ರಿಂದ ಜೂನ್ 28ರವರೆಗೆ ಮನೆ-ಮನೆಗೆ ಪರಿಶೀಲನೆ ನಡೆಯಲಿದೆ. ಈ ರಾಜ್ಯಗಳ ಅಂತಿಮ ಮತದಾರರ ಪಟ್ಟಿ ಸೆಪ್ಟೆಂಬರ್ 6ರಂದು ಪ್ರಕಟವಾಗಲಿದೆ.
ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್, ಮೇಘಾಲಯ ಮತ್ತು ದೆಹಲಿಯಲ್ಲಿ ಜೂನ್ ಅಂತ್ಯದಿಂದ ಅಭಿಯಾನ ಆರಂಭವಾಗಿ ಅಕ್ಟೋಬರ್ 7ರೊಳಗೆ ಪೂರ್ಣಗೊಳ್ಳಲಿದೆ. ಕರ್ನಾಟಕದಲ್ಲಿ ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಹಾಗೂ ಹೊಸ ಹೆಸರು ಸೇರಿಸಲು ಅವಕಾಶ ಕಲ್ಪಿಸಲಾಗುತ್ತದೆ. ಅಕ್ಟೋಬರ್ 7ರಂದು ಅಂತಿಮ ಪರಿಷ್ಕೃತ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.
ಅಂಕಿಅಂಶಗಳ ಪ್ರಕಾರ, ಈ ಹಂತದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು 9.86 ಕೋಟಿ ಮತದಾರರಿದ್ದು, ಅಲ್ಲಿ 97,924 ಬೂತ್ ಮಟ್ಟದ ಅಧಿಕಾರಿಗಳು ಮತ್ತು 96,949 ಬೂತ್ ಮಟ್ಟದ ಏಜೆಂಟರನ್ನು ನಿಯೋಜಿಸಲಾಗುತ್ತಿದೆ. ಕರ್ನಾಟಕದಲ್ಲಿ 5.55 ಕೋಟಿ ಮತದಾರರು ಈ ಅಭಿಯಾನದ ವ್ಯಾಪ್ತಿಗೆ ಬರುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ 4.16 ಕೋಟಿ ಹಾಗೂ ತೆಲಂಗಾಣದಲ್ಲಿ 3.39 ಕೋಟಿ ಮತದಾರರ ಪರಿಶೀಲನೆ ನಡೆಯಲಿದೆ.
ದೆಹಲಿಯಲ್ಲಿ ಸುಮಾರು 1.48 ಕೋಟಿ ಮತದಾರರಿಗಾಗಿ 13,026 ಬಿಎಲ್ಒಗಳು ಮತ್ತು 28,881 ಬಿಎಲ್ಎಗಳನ್ನು ನೇಮಕ ಮಾಡಲಾಗಿದೆ. ಚುನಾವಣಾ ಆಯೋಗದ ಪ್ರಕಾರ, ಮತದಾರರ ಪಟ್ಟಿಯನ್ನು ಪಾರದರ್ಶಕ ಹಾಗೂ ವಿಶ್ವಾಸಾರ್ಹಗೊಳಿಸಲು ಈ ವಿಶೇಷ ತೀವ್ರ ಪರಿಷ್ಕರಣೆ ಮಹತ್ವದ ಹೆಜ್ಜೆಯಾಗಿದೆ.
ಈಗಾಗಲೇ ನಡೆದ ಮೊದಲ ಎರಡು ಹಂತಗಳಲ್ಲಿ ದೇಶದ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 59 ಕೋಟಿ ಮತದಾರರು ಭಾಗವಹಿಸಿದ್ದರು. ಈ ಕಾರ್ಯದಲ್ಲಿ 6.3 ಲಕ್ಷ ಬಿಎಲ್ಒಗಳು ಮತ್ತು 9.2 ಲಕ್ಷ ಬಿಎಲ್ಎಗಳು ಪಾಲ್ಗೊಂಡಿದ್ದವು.
ಕರ್ನಾಟಕದ ವೇಳಾಪಟ್ಟಿ
ಜೂನ್ 20 ರಿಂದ ಜೂನ್ 29 : ತರಬೇತಿ ಮತ್ತು ಅರ್ಜಿ ಮುದ್ರಣ ಕಾರ್ಯ
ಜೂನ್ 30 ರಿಂದ ಜುಲೈ 29 : ಮನೆ-ಮನೆಗೆ ಪರಿಶೀಲನೆ
ಆಗಸ್ಟ್ 5 : ಕರಡು ಮತದಾರರ ಪಟ್ಟಿ ಪ್ರಕಟಣೆ
ಆಗಸ್ಟ್ 5 ರಿಂದ ಸೆಪ್ಟೆಂಬರ್ 4 : ಆಕ್ಷೇಪಣೆ ಹಾಗೂ ಹೊಸ ಹೆಸರು ಸೇರ್ಪಡೆಗೆ ಅವಕಾಶ
ಅಕ್ಟೋಬರ್ 7 : ಅಂತಿಮ ಪರಿಷ್ಕೃತ ಮತದಾರರ ಪಟ್ಟಿ ಪ್ರಕಟಣೆ