LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಸುವರ್ಣ ಯುಗದ ಮಧುರ ಧ್ವನಿ ಮೌನ

ಮುಂಬೈ, ಜೂನ್ 1 : ಭಾರತೀಯ ಚಿತ್ರಸಂಗೀತ ಲೋಕದ ಹಿರಿಯ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣಪುರ ಅವರು 89ನೇ ವಯಸ್ಸಿನಲ್ಲಿ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಸುಮಾರು ಏಳು ದಶಕಗಳ ಕಾಲ ತಮ್ಮ ಮಧುರ ಕಂಠದ ಮೂಲಕ ಸಂಗೀತಾಭಿಮಾನಿಗಳ ಮನಗೆದ್ದಿದ್ದ ಅವರು, ಭಾರತೀಯ ಚಿತ್ರಸಂಗೀತದ ಸುವರ್ಣ ಯುಗದ ಪ್ರಮುಖ ಗಾಯಕರಲ್ಲಿ ಒಬ್ಬರಾಗಿದ್ದರು. ಅವರ ನಿಧನದೊಂದಿಗೆ ಭಾರತೀಯ ಸಂಗೀತ ಕ್ಷೇತ್ರದ ಒಂದು ಮಹತ್ವದ ಅಧ್ಯಾಯ ಅಂತ್ಯಗೊಂಡಂತಾಗಿದೆ. ಮೃತರು ಪುತ್ರಿ ಚಾರು ಅಗ್ನಿ ಅವರನ್ನು ಅಗಲಿದ್ದಾರೆ.

1937ರ ಜನವರಿ 28ರಂದು ಆಗಿನ ಅವಿಭಜಿತ ಭಾರತದ ಭಾಗವಾಗಿದ್ದ ಢಾಕಾದಲ್ಲಿ ಜನಿಸಿದ್ದ ಸುಮನ್ ಕಲ್ಯಾಣಪುರ ಅವರ ಮೂಲ ಕುಟುಂಬ ಕರ್ನಾಟಕದ ಉಡುಪಿ ಜಿಲ್ಲೆಯ ಹೆಮ್ಮಾಡಿ ಗ್ರಾಮಕ್ಕೆ ಸೇರಿದ್ದಾಗಿದೆ. ಅವರ ಬಾಲ್ಯದ ದಿನಗಳಲ್ಲೇ ಕುಟುಂಬ ಮುಂಬೈನಲ್ಲಿ ನೆಲೆಸಿತ್ತು. ಸೆಂಟ್ ಕೊಲಂಬಸ್ ಶಾಲೆಯಲ್ಲಿ ಶಿಕ್ಷಣ ಪಡೆದ ಅವರು, ಬಳಿಕ ಸರ್ ಜೆಜೆ ಕಲಾ ಶಾಲೆಯಲ್ಲಿ ಚಿತ್ರಕಲೆ ಅಭ್ಯಾಸ ಮಾಡಿದರು. ಆದರೆ ಸಂಗೀತದ ಮೇಲಿನ ಅಪಾರ ಆಸಕ್ತಿ ಅವರನ್ನು ಗಾಯನ ಕ್ಷೇತ್ರದತ್ತ ಕೊಂಡೊಯ್ದಿತು.

ಪಂಡಿತ ಕೇಶವರಾವ್ ಭೋಲೆ, ಉಸ್ತಾದ ಖಾನ್ ಅಬ್ದುಲ್ ರಹಮಾನ್ ಖಾನ್ ಹಾಗೂ ಮಾಸ್ಟರ್ ನವರಂಗ್ ಅವರಿಂದ ಸಂಗೀತ ಶಿಕ್ಷಣ ಪಡೆದ ಅವರು, ಶಾಸ್ತ್ರೀಯ ಸಂಗೀತದಲ್ಲಿ ಗಟ್ಟಿಯಾದ ನೆಲೆ ನಿರ್ಮಿಸಿಕೊಂಡರು. ಇದೇ ಶಿಕ್ಷಣ ಮುಂದೆ ಅವರನ್ನು ದೇಶದ ಪ್ರಮುಖ ಹಿನ್ನೆಲೆ ಗಾಯಕಿಯನ್ನಾಗಿ ರೂಪಿಸಿತು.

1954ರಲ್ಲಿ ಬಿಡುಗಡೆಯಾದ ಶುಕ್ರಚಿ ಚಾಂದನಿ ಹಾಗೂ ಮಂಗು ಚಿತ್ರಗಳ ಮೂಲಕ ಗಾಯನ ಕ್ಷೇತ್ರಕ್ಕೆ ಕಾಲಿಟ್ಟ ಸುಮನ್ ಕಲ್ಯಾಣಪುರ ಅವರು, ಆರಂಭದಲ್ಲಿಯೇ ತಮ್ಮ ವಿಶಿಷ್ಟ ಧ್ವನಿಯಿಂದ ಗಮನ ಸೆಳೆದಿದ್ದರು. ಆ ಬಳಿಕ ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ನಿರಂತರ ಅವಕಾಶಗಳನ್ನು ಪಡೆದು ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡರು.

1950, 1960 ಮತ್ತು 1970ರ ದಶಕಗಳಲ್ಲಿ ಭಾರತೀಯ ಚಿತ್ರಸಂಗೀತ ಕ್ಷೇತ್ರದಲ್ಲಿ ಲತಾ ಮಂಗೇಶ್ಕರ್ ಮತ್ತು ಆಶಾ ಬೋಸ್ಲೆ ಅವರ ಪ್ರಾಬಲ್ಯವಿದ್ದ ಕಾಲಘಟ್ಟದಲ್ಲೂ ಸುಮನ್ ಕಲ್ಯಾಣಪುರ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು. ಅವರ ಧ್ವನಿಯ ಮಧುರತೆ ಮತ್ತು ಸ್ಪಷ್ಟತೆ ಕಾರಣದಿಂದ ಅನೇಕ ಬಾರಿ ಅವರು ಹಾಡಿದ ಹಾಡುಗಳನ್ನು ಲತಾ ಮಂಗೇಶ್ಕರ ಹಾಡಿದ್ದಾರೆ ಎಂದು ಹಲವರು ಭಾವಿಸುತ್ತಿದ್ದರು.

ಹಲವು ಪ್ರಮುಖ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಸುಮನ್ ಕಲ್ಯಾಣಪುರ ಅವರು, ಸಾವಿರಾರು ಚಿತ್ರಗೀತೆಗಳಿಗೆ ಧ್ವನಿಯಾಗಿದ್ದರು. ಅವರ ಗಾಯನದಲ್ಲಿ ಮೂಡಿಬಂದ ಭಾವಪೂರ್ಣತೆ ಮತ್ತು ಮಧುರತೆ ಸಂಗೀತಾಸಕ್ತರನ್ನು ಸೆಳೆಯುತ್ತಿತ್ತು. ಪ್ರೇಮಗೀತೆ, ವಿರಹಗೀತೆ, ಭಕ್ತಿಗೀತೆ, ಭಾವಗೀತೆ ಹೀಗೆ ಎಲ್ಲ ಪ್ರಕಾರದ ಹಾಡುಗಳಲ್ಲೂ ಅವರು ತಮ್ಮ ಪ್ರತಿಭೆ ಮೆರೆದಿದ್ದರು.

news_1780306004_0_494.webp

 

ವಿಶೇಷವಾಗಿ ಗಾಯನ ದಂತಕಥೆ ಮೊಹಮ್ಮದ ರಫಿ ಅವರೊಂದಿಗೆ ಹಾಡಿದ ಯುಗಳಗೀತೆಗಳು ಭಾರತೀಯ ಚಿತ್ರಸಂಗೀತ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿವೆ. ಆಜ್ ಕಲ್ ತೆರೆ ಮೇರೆ ಪ್ಯಾರ್ ಕೆ ಚರ್ಚೇ, ನಾ ನಾ ಕರ್ತೆ ಪ್ಯಾರ್ ತುಮ್ಹೀಂ ಸೇ, ತುಮ್ನೇ ಪುಕಾರಾ ಔರ್ ಹಮ್ ಚಲೇ ಆಯೇ, ದಿಲ್ ಏಕ್ ಮಂದಿರ ಹೈ ಸೇರಿದಂತೆ ನೂರಾರು ಗೀತೆಗಳು ಇಂದಿಗೂ ಜನಪ್ರಿಯವಾಗಿವೆ. ರಫಿ ಮತ್ತು ಸುಮನ್ ಅವರ ಗಾಯನ ಜೋಡಿ ಆ ಕಾಲದ ಅತ್ಯಂತ ಯಶಸ್ವಿ ಸಂಗೀತ ಜೋಡಿಗಳಲ್ಲಿ ಒಂದಾಗಿತ್ತು.

ಹಿಂದಿ ಮತ್ತು ಮರಾಠಿ ಚಿತ್ರರಂಗದ ಜೊತೆಗೆ ಕನ್ನಡ, ಗುಜರಾತಿ, ಬೆಂಗಾಲಿ, ಪಂಜಾಬಿ, ಅಸ್ಸಾಮಿ, ಭೋಜಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ಹಾಡುಗಳನ್ನು ಹಾಡಿದ್ದರು. ಭಾರತೀಯ ಸಂಗೀತದ ವೈವಿಧ್ಯತೆಯನ್ನು ತಮ್ಮ ಗಾಯನದ ಮೂಲಕ ಅವರು ಮತ್ತಷ್ಟು ಶ್ರೀಮಂತಗೊಳಿಸಿದ್ದರು.

ಚಿತ್ರಗೀತೆಗಳಷ್ಟೇ ಅಲ್ಲದೆ ಭಜನೆ, ಗಝಲ್, ಭಕ್ತಿಗೀತೆ ಹಾಗೂ ಭಾವಗೀತೆಗಳ ಕ್ಷೇತ್ರದಲ್ಲಿಯೂ ಅವರು ಅಪಾರ ಸಾಧನೆ ಮಾಡಿದ್ದರು. ಅವರ ಧ್ವನಿಯಲ್ಲಿ ಮೂಡಿಬಂದ ಭಕ್ತಿಗೀತೆಗಳು ಮತ್ತು ಗಝಲ್‌ಗಳು ಸಂಗೀತಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದ್ದವು. ಮರಾಠಿ ಸಂಗೀತ ಕ್ಷೇತ್ರದಲ್ಲಿ ಅವರು ಭಾವಗೀತೆಗಳ ಪ್ರಮುಖ ಧ್ವನಿಯಾಗಿ ಗುರುತಿಸಿಕೊಂಡಿದ್ದರು.

1958ರಲ್ಲಿ ರಮಾನಂದ ಕಲ್ಯಾಣಪುರ ಅವರನ್ನು ವಿವಾಹವಾದ ಅವರು, ಕುಟುಂಬ ಜೀವನದ ಜೊತೆಗೆ ಸಂಗೀತ ಕ್ಷೇತ್ರದಲ್ಲಿಯೂ ಯಶಸ್ವಿ ಪಯಣ ಮುಂದುವರಿಸಿದರು. ಸಂಗೀತದ ಮೇಲಿನ ಅವರ ಸಮರ್ಪಣೆ ಮತ್ತು ಶಿಸ್ತು ಅವರನ್ನು ದೀರ್ಘಕಾಲ ಚಿತ್ರಸಂಗೀತ ಲೋಕದಲ್ಲಿ ಉಳಿಯುವಂತೆ ಮಾಡಿತು.

ಭಾರತೀಯ ಸಂಗೀತ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದ್ದವು. ಮಹಾರಾಷ್ಟ್ರ ಸರ್ಕಾರದ ಲತಾ ಮಂಗೇಶ್ಕರ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಅವರು ಪಾತ್ರರಾಗಿದ್ದರು. 2023ರಲ್ಲಿ ಭಾರತ ಸರ್ಕಾರವು ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು.

ಅವರ ನಿಧನಕ್ಕೆ ಶರದ ಪವಾರ, ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವು ರಾಜಕೀಯ, ಸಾಂಸ್ಕೃತಿಕ ಹಾಗೂ ಸಂಗೀತ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಭಾರತೀಯ ಸಂಗೀತ ಲೋಕಕ್ಕೆ ಸುಮನ್ ಕಲ್ಯಾಣಪುರ ನೀಡಿದ ಕೊಡುಗೆ ಅನನ್ಯವಾಗಿದ್ದು, ಅವರ ಹಾಡುಗಳು ಸದಾ ಜೀವಂತವಾಗಿರಲಿವೆ ಎಂದು ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.

ಸುಮನ್ ಕಲ್ಯಾಣಪುರ ಅವರ ಅಗಲಿಕೆಯೊಂದಿಗೆ ಭಾರತೀಯ ಚಿತ್ರಸಂಗೀತದ ಸುವರ್ಣ ಯುಗದ ಮತ್ತೊಂದು ಮಧುರ ಧ್ವನಿ ಮೌನಗೊಂಡಿದೆ. ಆದರೆ ಅವರು ಹಾಡಿದ ಸಾವಿರಾರು ಹಾಡುಗಳು, ಅವರ ವಿಶಿಷ್ಟ ಗಾಯನ ಶೈಲಿ ಮತ್ತು ಸಂಗೀತಕ್ಕೆ ನೀಡಿದ ಕೊಡುಗೆ ಮುಂದಿನ ಪೀಳಿಗೆಗಳಿಗೂ ಪ್ರೇರಣೆಯಾಗಿಯೇ ಉಳಿಯಲಿದೆ.

news_1780306031_0_322.webp

news_1780306195_0_948.webp

 

 

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ: ಪ್ರತಿಭಟಟಿಸಲು ಅಮೆರಿಕದಿಂದ ಭಾರತಕ್ಕೆ ಮರಳುತ್ತಿರುವ ಅಭಿಜೀತ ದಿಪ್ಕೆರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆಗಳಿಗೆ ಅಧಿಸೂಚನೆ : ಜೂ. 18ರಂದು ಮತದಾನಮುಸ್ಲಿಮರಿಗೆ ಕನಿಷ್ಠ ಪ್ರಾತಿನಿಧ್ಯವನ್ನಾದರೂ ಕೊಡಿ : ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹವಾಣಿಜ್ಯ ಸಿಲಿಂಡರ್ ದರ ಮತ್ತೆ  42 ರೂ. ಹೆಚ್ಚಳ!ಗುಜರಾತ್ ಟೈಟನ್ಸ್ ಆಟಗಾರರಿದ್ದ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್ಗೋವಾದಲ್ಲಿ ಕರ್ನಾಟಕ ವಾಹನಗಳಿಗೆ ಭಾರೀ ದಂಡ: ಮುಖ್ಯಮಂತ್ರಿಗೆ ಬೆನಕೆ ಮನವಿ ಇರಾನ್‌ ಮೇಲೆ ಮತ್ತೆ ದಾಳಿ ನಡೆಸಿದ ಅಮೆರಿಕಸುವರ್ಣ ಯುಗದ ಮಧುರ ಧ್ವನಿ ಮೌನಈ ಬಾರಿಯ ಮುಂಗಾರು ದುರ್ಬಲ, ವಾಡಿಕೆಗಿಂತ ಕಡಿಮೆ ಮಳೆ ಸಾಧ್ಯತೆ3 ತಿಂಗಳಲ್ಲಿ ತೀರ್ಪು ಪ್ರಕಟಿಸಿ: ಎಲ್ಲ ಹೈಕೋರ್ಟಗಳಿಗೆ ಸುಪ್ರೀಮ ಕೋರ್ಟ ನಿರ್ದೇಶನ