LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ವಾರದೊಳಗೆ ನೀಟ್‌ ಮರುಪರೀಕ್ಷೆಯ ದಿನಾಂಕ ಘೋಷಣೆ

ಹೊಸದಿಲ್ಲಿ, ಮೇ 13 : ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಳೆದ ಮೇ 3ರಂದು ನಡೆದಿದ್ದ ನೀಟ್‌-ಯುಜಿ ಪರೀಕ್ಷೆಯ ಮರುಪರೀಕ್ಷೆಯ ದಿನಾಂಕವನ್ನು ಇನ್ನೊಂದು ವಾರದೊಳಗೆ ಘೋಷಿಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿದೆ.

ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪರೀಕ್ಷೆಯ ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯನ್ನು ಕಾಪಾಡುವ ಉದ್ದೇಶದಿಂದ ಮರುಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.

ನೀಟ್‌ ಮರುಪರೀಕ್ಷೆ ಯಾವಾಗ ನಡೆಯಲಿದೆ ಎಂಬ ಆತಂಕದಲ್ಲಿದ್ದ ವಿದ್ಯಾರ್ಥಿಗಳಿಗೆ 7ರಿಂದ 10 ದಿನಗಳೊಳಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್‌ ಸಿಂಗ್‌ ತಿಳಿಸಿದ್ದಾರೆ. ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಮರುಪರೀಕ್ಷೆಯ ದಿನಾಂಕ ಹಾಗೂ ಇತರೆ ಮಾಹಿತಿಗಳನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಕಳೆದ ಮೇ 3ರಂದು ದೇಶಾದ್ಯಂತ ನೀಟ್‌ ಪರೀಕ್ಷೆ ನಡೆದಿತ್ತು. ಪರೀಕ್ಷೆಯ ಬಳಿಕ ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಭಾಗದ ಸುಮಾರು 100ಕ್ಕೂ ಹೆಚ್ಚು ಪ್ರಶ್ನೆಗಳು ಅಸಲಿ ಪ್ರಶ್ನೆಪತ್ರಿಕೆಗೆ ಹೋಲಿಕೆಯಾಗಿವೆ ಎಂಬ ಆರೋಪ ಕೇಳಿಬಂದಿತ್ತು. ವಿಶೇಷವಾಗಿ ರಾಜಸ್ಥಾನದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವರದಿಗಳು ದೇಶಾದ್ಯಂತ ಸಂಚಲನ ಮೂಡಿಸಿವೆ.

ಪ್ರಶ್ನೆಪತ್ರಿಕೆ ಸೋರಿಕೆ ಹಿಂದೆ ಕೆಲವು ಕೋಚಿಂಗ್‌ ಕೇಂದ್ರಗಳ ಕೈವಾಡವಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ. ಆದರೆ ಎಷ್ಟು ರಾಜ್ಯಗಳಿಗೆ ಈ ಜಾಲ ವಿಸ್ತರಿಸಿತ್ತು ಎಂಬ ಕುರಿತು ಎನ್‌ಟಿಎ ಇನ್ನೂ ಸ್ಪಷ್ಟ ಮಾಹಿತಿ ನೀಡಿಲ್ಲ.

ವೈದ್ಯರ ಪುತ್ರನ ಬಂಧನ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬ್ಯಾಚುಲರ್‌ ಆಫ್‌ ಆಯುರ್ವೇದ ಮೆಡಿಸಿನ್‌ ಅಂಡ್‌ ಸರ್ಜರಿ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತನನ್ನು ಶುಭಂ ಖೈರ್ನರ್‌ (30) ಎಂದು ಗುರುತಿಸಲಾಗಿದೆ. ಈತ ಪ್ರಶ್ನೆಪತ್ರಿಕೆಯನ್ನು ಪುಣೆ ಮೂಲದ ಶಂಕಿತನಿಂದ 10 ಲಕ್ಷ ರೂ.ಗೆ ಖರೀದಿಸಿ, ಬಳಿಕ ಹರಿಯಾಣ ಮೂಲದ ವ್ಯಕ್ತಿಗೆ 15 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ಆರಂಭಿಸಿದೆ. ನಾಸಿಕ್‌ ಅಪರಾಧ ವಿಭಾಗದಿಂದ ಬಂಧಿಸಲಾಗಿದ್ದ ವಿದ್ಯಾರ್ಥಿಯನ್ನು ಬಳಿಕ ಸಿಬಿಐ ತನ್ನ ವಶಕ್ಕೆ ಪಡೆದುಕೊಂಡಿದೆ.

ತನಿಖೆ ಮುಂದುವರಿದಂತೆ ಹೊಸಹೊಸ ಮಾಹಿತಿಗಳು ಹೊರಬರುತ್ತಿವೆ. ಆರಂಭದಲ್ಲಿ ನಾಸಿಕ್‌ನ ಮುದ್ರಣಾಲಯದಿಂದಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಪರೀಕ್ಷಾ ಪ್ರಶ್ನೆಪತ್ರಿಕೆ ಅಲ್ಲಿ ಮುದ್ರಣವಾಗಿಲ್ಲ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಇದೇ ವೇಳೆ ಶುಭಂ ಖೈರ್ನರ್‌ ತಂದೆ ಹಾಗೂ ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಮಧುಕರ್‌ ಖೈರ್ನರ್‌ ತಮ್ಮ ಮಗನ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದ್ದು, ಆತ ನಿರಪರಾಧಿ ಎಂದು ಪ್ರತಿಪಾದಿಸಿದ್ದಾರೆ.

ರಾಜಸ್ಥಾನದಿಂದ ವಿವಿಧ ರಾಜ್ಯಗಳಿಗೆ ಜಾಲ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಒಜಿ) ಸೋರಿಕೆಯ ಮೂಲವನ್ನು ಪತ್ತೆಹಚ್ಚಿದೆ. ಮಹಾರಾಷ್ಟ್ರದ ನಾಸಿಕ್‌ನಿಂದ ಸೋರಿಕೆಯಾದ ಪ್ರಶ್ನೆಪತ್ರಿಕೆ ರಾಜಸ್ಥಾನದ ಸಿಕರ್‌ಗೆ ತಲುಪಿದ್ದು, ಅಲ್ಲಿಂದ ಹರಿಯಾಣ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ವಿದ್ಯಾರ್ಥಿಗಳಿಗೆ ವಾಟ್‌್ಸಆಪ್‌ ಹಾಗೂ ಟೆಲಿಗ್ರಾಂ ಗುಂಪುಗಳ ಮೂಲಕ ರವಾನಿಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಪಾಸ್‌ವರ್ಡ್‌ ರಕ್ಷಿತ ಪಿಡಿಎಫ್‌ ರೂಪದಲ್ಲಿ ಪ್ರಶ್ನೆಪತ್ರಿಕೆ ಹಂಚಿಕೆ ಮಾಡಲಾಗಿದ್ದು, ಹಣ ಪಾವತಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಅದನ್ನು ಕಳುಹಿಸಲಾಗುತ್ತಿತ್ತು ಎನ್ನಲಾಗಿದೆ.

ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಭಾಗದ 130ಕ್ಕೂ ಹೆಚ್ಚು ಪ್ರಶ್ನೆಗಳು ಸೋರಿಕೆಯಾದ ಪ್ರಶ್ನೆಪತ್ರಿಕೆಗೆ ಹೋಲಿಕೆಯಾಗಿವೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಕೇರಳದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ರಾಜಸ್ಥಾನ ಮೂಲದ ವಿದ್ಯಾರ್ಥಿಯ ಮೂಲಕ ಈ ಜಾಲ ಕಾರ್ಯನಿರ್ವಹಿಸುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಹರಿಯಾಣದ ಗುರುಗ್ರಾಮದಲ್ಲಿರುವ ವೈದ್ಯ ಹಾಗೂ ರಾಜಸ್ಥಾನದ ಸಿಕರ್‌ನಲ್ಲಿರುವ ತರಬೇತಿ ಕೇಂದ್ರದ ಪಾತ್ರವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮೇ 3ರಂದು ನಡೆದ ಪರೀಕ್ಷೆಗೆ ಮುನ್ನವೇ ಪ್ರಶ್ನೆಪತ್ರಿಕೆಯನ್ನು ವಾಟ್‌್ಸಆಪ್‌ ಹಾಗೂ ಟೆಲಿಗ್ರಾಂ ಮೂಲಕ ಹರಡಲಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಡಿಕೋಡ್‌ ಮಾಡಲಾದ ಚಾಟ್‌ಗಳ ಆಧಾರದ ಮೇಲೆ ಪ್ರಶ್ನೆಪತ್ರಿಕೆಯನ್ನು 30 ಸಾವಿರ ರೂ.ಗಳಿಂದ 28 ಲಕ್ಷ ರೂ.ವರೆಗೆ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಅಕ್ರಮದ ಹಿಂದೆ ಸಂಘಟಿತ ಜಾಲ ಕಾರ್ಯನಿರ್ವಹಿಸಿರುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST