ಹೊಸದಿಲ್ಲಿ, ಮೇ 22 : ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಗುರುವಾರ ರಾತ್ರಿ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಪೂರ್ಣ ತುರ್ತು ಸನ್ನಿವೇಶ ಘೋಷಿಸಲಾಯಿತು.
ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 29ಆರ್ ರನ್‌ವೇನಲ್ಲಿ ರಾತ್ರಿ ಸುಮಾರು 9.30ಕ್ಕೆ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ರನ್‌ವೇಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಲ್ಯಾಂಡಿಂಗ್‌ಗೆ ಕೆಲವೇ ಕ್ಷಣಗಳ ಮೊದಲು ಎಂಜಿನ್‌ನಲ್ಲಿ ಬೆಂಕಿಯ ಎಚ್ಚರಿಕೆ ಸಂದೇಶ ಕಾಣಿಸಿಕೊಂಡಿದ್ದು, ವಿಮಾನ ಇಳಿದ ತಕ್ಷಣ ಬೆಂಕಿಯನ್ನು ನಂದಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಎ321 ಮಾದರಿಯ ವಿಟಿ-ಸಿಐಒ ಏರ್‌ಬಸ್ ವಿಮಾನವನ್ನು ಬಳಿಕ ರನ್‌ವೇಯಿಂದ ತೆರವುಗೊಳಿಸಲಾಗಿದ್ದು, ವಿಮಾನದಲ್ಲಿದ್ದ 180 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಡಿಜಿಸಿಎ ತಂಡ ತನಿಖೆ ಆರಂಭಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಏರ್ ಇಂಡಿಯಾ, ಮೇ 21ರಂದು ಬೆಂಗಳೂರಿನಿಂದ ದೆಹಲಿಗೆ ಆಗಮಿಸಿದ್ದ ಎಐ 2802 ವಿಮಾನದ ಕಾಕ್‌ಪಿಟ್ ಸಿಬ್ಬಂದಿಗೆ ಒಂದು ಎಂಜಿನ್‌ನಿಂದ ಬೆಂಕಿಯ ಸುಳಿವು ದೊರೆತಿತ್ತು ಎಂದು ತಿಳಿಸಿದೆ.
ತಕ್ಷಣ ನಿಗದಿತ ತುರ್ತು ಕಾರ್ಯಾಚರಣೆ ಕ್ರಮಗಳನ್ನು ಅನುಸರಿಸಲಾಗಿದ್ದು, ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರತೆಗೆದಿರುವುದಾಗಿ ಸಂಸ್ಥೆ ಸ್ಪಷ್ಟಪಡಿಸಿದೆ.
ಬೆಂಕಿಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಲು ಸಂಬಂಧಿತ ಅಧಿಕಾರಿಗಳು ಹಾಗೂ ಏಜೆನ್ಸಿಗಳೊಂದಿಗೆ ಸೇರಿ ಪೂರ್ಣ ಪ್ರಮಾಣದ ತನಿಖೆ ಆರಂಭಿಸಲಾಗಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಗರಿಷ್ಠ ಆದ್ಯತೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.