ಧಾರ್, ಏ. 30 : ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಪಿಕ್‌ಅಪ್ ವಾಹನ ಮತ್ತು ಎಸ್‌ಯುವಿ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ 15 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದೋರ್–ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಚಿಕ್ಲಿಯಾ ಕ್ರಾಸಿಂಗ್ ಬಳಿ ನಿನ್ನೆ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕ್‌ಅಪ್ ವಾಹನ ಪಲ್ಟಿಯಾಗಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಎಸ್‌ಯುವಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಆರಂಭದಲ್ಲಿ 12 ಮಂದಿ ಸಾವನ್ನಪ್ಪಿದ ಮಾಹಿತಿ ಬಂದಿದ್ದರೂ, ನಂತರ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಪಿಕ್‌ಅಪ್ ವಾಹನದಲ್ಲಿ ಒಟ್ಟು 46 ಮಂದಿ, ಹೆಚ್ಚಿನವರು ಕಾರ್ಮಿಕರು, ಪ್ರಯಾಣಿಸುತ್ತಿದ್ದರು. ವಾಹನ ಪಲ್ಟಿಯಾದದ್ದೇ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಇಂದೋರ್ ವಿಭಾಗೀಯ ಆಯುಕ್ತ ಡಾ. ಸುದಮ್ ಪಿ ಖಾಡೆ ತಿಳಿಸಿದ್ದಾರೆ.
ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ಒದಗಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಸೂಚನೆ ನೀಡಿದ್ದಾರೆ. ಯಾರೂ ಆರೈಕೆಯಿಲ್ಲದೆ ಉಳಿಯದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆಗಳನ್ನು ಖಾಡೆ ಮತ್ತು ಇನ್‌ಸ್ಪೆಕ್ಟರ್ ಜನರಲ್ ಅನುರಾಗ್ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಏಳು ಗಾಯಾಳುಗಳನ್ನು ಇಂದೋರ್‌ಗೆ ಸಾಗಿಸಲಾಗಿದ್ದು, ಇನ್ನೂ 15 ಮಂದಿ ಸ್ಥಳೀಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಲಾಗಿದೆ.
ರಾತ್ರಿ 8.30 ರಿಂದ 9 ಗಂಟೆಯ ನಡುವೆ ಅಪಘಾತ ಸಂಭವಿಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡ ಕಾರಣ ಈ ದುರ್ಘಟನೆ ನಡೆದಿದೆ. ತಿಲಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.