ಹೊಸದಿಲ್ಲಿ, ಮೇ 29 : ಆದೇಶಗಳನ್ನು ಕಾಯ್ದಿರಿಸಿದ ಮೂರು ತಿಂಗಳೊಳಗೆ ತೀರ್ಪು ಪ್ರಕಟಿಸಬೇಕು ಎಂದು ದೇಶದ ಎಲ್ಲ ಹೈಕೋರ್ಟಗಳಿಗೆ ಸುಪ್ರೀಮ ಕೋರ್ಟ ಶುಕ್ರವಾರ ಮಹತ್ವದ ನಿರ್ದೇಶನ ನೀಡಿದೆ. ತೀರ್ಪು ಪ್ರಕಟಿಸುವಲ್ಲಿ ಆಗುವ ವಿಳಂಬವು ದಾವೆದಾರರಿಗೆ ತುಂಬಲಾರದ ನಷ್ಟ ಉಂಟುಮಾಡುತ್ತದೆ ಎಂದು ಸುಪ್ರೀಮ ಕೋರ್ಟ ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜಾಯಮಾಲ್ಯ ಬಾಗ್ಚಿ ಅವರಿದ್ದ ಪೀಠ, ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೀಘ್ರ ತೀರ್ಪಿನ ಅಗತ್ಯವನ್ನು ಒತ್ತಿ ಹೇಳಿತು.
ಜಾಮೀನು ಅರ್ಜಿಗಳನ್ನು ಸಾಧ್ಯವಾದರೆ ಅದೇ ದಿನವೇ ಇತ್ಯರ್ಥಗೊಳಿಸಬೇಕು. ಒಂದು ವೇಳೆ ಆದೇಶವನ್ನು ಕಾಯ್ದಿರಿಸಿದರೆ, ಅದನ್ನು ಮರುದಿನವೇ ಪ್ರಕಟಿಸಿ ಜಾಲತಾಣದಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಸೂಚಿಸಿದೆ.
ಜಾಮೀನು ಮಂಜೂರು ಅಥವಾ ಶಿಕ್ಷೆ ಅಮಾನತು ಆದೇಶಗಳನ್ನು ಕೂಡಲೇ ಜೈಲು ಅಧಿಕಾರಿಗಳಿಗೆ ತಲುಪಿಸಬೇಕು. ವಿಚಾರಣಾಧೀನ ಕೈದಿ ಅಥವಾ ಅಪರಾಧಿಯನ್ನು ಅದೇ ದಿನ ಅಥವಾ ತಡವಾದರೆ ಮರುದಿನ ಬಿಡುಗಡೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಮ ಕೋರ್ಟ ಹೇಳಿದೆ.
ಸಂವಿಧಾನದ 142ನೇ ವಿಧಿಯಡಿ ತನ್ನ ವಿಶೇಷ ಅಧಿಕಾರ ಬಳಸಿರುವ ಸುಪ್ರೀಮ ಕೋರ್ಟ, ತೀರ್ಪಿನ ಕಾರ್ಯಾಚರಣೆಯ ಭಾಗವನ್ನು ಮೊದಲು ಪ್ರಕಟಿಸಿದರೆ, ಅದರ ಸಂಪೂರ್ಣ ಕಾರಣಸಹಿತ ತೀರ್ಪನ್ನು 15 ದಿನಗಳೊಳಗೆ ಅಪ್‌ಲೋಡ್ ಮಾಡಬೇಕು ಎಂದು ತಿಳಿಸಿದೆ.
ಆದೇಶವನ್ನು ಕಾಯ್ದಿರಿಸಿದ ನಾಲ್ಕು ತಿಂಗಳಾದರೂ ತೀರ್ಪು ಪ್ರಕಟವಾಗದಿದ್ದರೆ, ಪ್ರಕರಣವನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸುವಂತೆ ಕೋರಿ ಅರ್ಜಿದಾರರು ಸಂಬಂಧಿತ ಹೈಕೋರ್ಟನ ಮುಖ್ಯ ನ್ಯಾಯಮೂರ್ತಿಯನ್ನು ಸಂಪರ್ಕಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮುಕ್ತ ನ್ಯಾಯಾಲಯದಲ್ಲಿ ಸಕಾರಣ ತೀರ್ಪು ಪ್ರಕಟಿಸಿದ ಸಂದರ್ಭದಲ್ಲೂ ಅದನ್ನು 24 ಗಂಟೆಗಳೊಳಗೆ ನ್ಯಾಯಾಲಯದ ಜಾಲತಾಣದಲ್ಲಿ ಪ್ರಕಟಿಸಬೇಕು ಎಂದು ನಿರ್ದೇಶನ ನೀಡಿದೆ.
ಈ ನಿರ್ದೇಶನಗಳು ಯಾವುದೇ ನಿರ್ದಿಷ್ಟ ನ್ಯಾಯಾಧೀಶ ಅಥವಾ ಹೈಕೋರ್ಟನ ತೀರ್ಪಿನ ಕುರಿತು ಆಕ್ಷೇಪ ವ್ಯಕ್ತಪಡಿಸುವ ಉದ್ದೇಶದಿಂದ ನೀಡಲಾಗಿಲ್ಲ. ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಸಮಯೋಚಿತ ನ್ಯಾಯ ಖಚಿತಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸುಪ್ರೀಮ ಕೋರ್ಟ ಸ್ಪಷ್ಟಪಡಿಸಿದೆ.