LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಸತೀಶ ಜಾರಕಿಹೊಳಿಗೆ ಡಿಸಿಎಂ ಅಥವಾ ಕೆಪಿಸಿಸಿ ಅಧ್ಯಕ್ಷ ಪಟ್ಟ?

(ಸಮದರ್ಶಿ ವಿಶೇಷ)

ಬೆಳಗಾವಿ, ಮೇ 27 : ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ಮತ್ತೆ ಜೋರಾಗಿರುವ ನಡುವೆಯೇ, ಮುಂದಿನ ರಾಜಕೀಯ ಸಮೀಕರಣಗಳ ಕುರಿತು ಪಕ್ಷದೊಳಗೆ ತೀವ್ರ ಚಟುವಟಿಕೆಗಳು ಆರಂಭವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುದ್ದೆ ತ್ಯಜಿಸುವ ಕುರಿತು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆದಿವೆ ಎನ್ನಲಾಗುತ್ತಿದ್ದು, ಅದರ ಬೆನ್ನಲ್ಲೇ ಹೊಸ ಸರಕಾರದ ರೂಪುರೇಷೆಗಳ ಕುರಿತ ಮಾತುಕತೆಗಳು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಹುಟ್ಟಿಸಿವೆ.

ಪಕ್ಷದ ಉನ್ನತ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸ್ಥಾನ ಬದಲಾವಣೆ ಅನಿವಾರ್ಯವಾದರೆ, ಅದರೊಂದಿಗೆ ಪಕ್ಷದ ಸಂಘಟನೆ ಮತ್ತು ಸರಕಾರದ ಮೇಲಿನ ನಿಯಂತ್ರಣವನ್ನು ಸಿದ್ದರಾಮಯ್ಯ ಪರ ವಲಯದ ಕೈಯಲ್ಲೇ ಉಳಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಇದೇ ಹಿನ್ನೆಲೆಯಲ್ಲಿ ಮುಂದಿನ ಸರಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಗಳು, ಕೆಪಿಸಿಸಿ ಅಧ್ಯಕ್ಷ ಸ್ಥಾನ, ಪ್ರಮುಖ ಸಚಿವ ಖಾತೆಗಳ ಹಂಚಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ಸಿದ್ದರಾಮಯ್ಯ ಅಭಿಪ್ರಾಯಕ್ಕೆ ಮಹತ್ವ ನೀಡಲಾಗುತ್ತಿದೆ ಎನ್ನಲಾಗಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದ್ದರೂ, ಹೊಸ ಸರಕಾರದ ಅಧಿಕಾರ ಸಮತೋಲನ ಸಂಪೂರ್ಣವಾಗಿ ಒಂದೇ ಗುಂಪಿನ ಕೈಗೆ ಹೋಗದಂತೆ ಹೈಕಮಾಂಡ್ ಲೆಕ್ಕಾಚಾರ ರೂಪಿಸುತ್ತಿದೆ. ಹೀಗಾಗಿ ಅಹಿಂದ ಮತಬ್ಯಾಂಕ್ ಮೇಲೆ ಪ್ರಭಾವ ಹೊಂದಿರುವ ನಾಯಕರಿಗೆ ಹೆಚ್ಚಿನ ಸ್ಥಾನಮಾನ ನೀಡುವ ಸಾಧ್ಯತೆಗಳಿವೆ.

ಮೂವರು ಡಿಸಿಎಂ ಲೆಕ್ಕಾಚಾರ

ಮುಂದಿನ ಸಚಿವ ಸಂಪುಟದಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಿಸುವ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಜೋರಾಗಿದೆ. ಅವರಲ್ಲಿ ಇಬ್ಬರು ಅಹಿಂದ ವರ್ಗದವರಾಗಿದ್ದು, ಇನ್ನೊಬ್ಬರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಮೂಲಕ ಪ್ರಾದೇಶಿಕ, ಜಾತಿ ಹಾಗೂ ಸಮುದಾಯ ಸಮತೋಲನ ಸಾಧಿಸುವ ತಂತ್ರ ರೂಪಿಸಲಾಗುತ್ತಿದೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಎದುರಿಸುತ್ತಿರುವ ಒಳಗುಂಪು ಅಸಮಾಧಾನ ತಗ್ಗಿಸಲು ಈ ಮಾದರಿಯ ಸಮನ್ವಯ ಸೂತ್ರ ಅನುಸರಿಸುವ ಸಾಧ್ಯತೆಗಳಿವೆ.

ಸತೀಶ ಜಾರಕಿಹೊಳಿ ಹೆಸರು ಮುಂಚೂಣಿಯಲ್ಲಿ

ಈ ರಾಜಕೀಯ ಬೆಳವಣಿಗೆಯ ಮಧ್ಯೆ ಸಾರ್ವಜನಿಕ ಕಾಮಗಾರಿ ಸಚಿವ ಸತೀಶ ಜಾರಕಿಹೊಳಿ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಬೆಳಗಾವಿ ಭಾಗದಲ್ಲಿ ಬಲವಾದ ರಾಜಕೀಯ ಪ್ರಭಾವ ಹೊಂದಿರುವ ಅವರು, ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಸಂಘಟನೆ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಅಭಿಪ್ರಾಯ ಪಕ್ಷದೊಳಗಿದೆ.

ಅಹಿಂದ ರಾಜಕೀಯದ ಜೊತೆ ವೈಚಾರಿಕ ರಾಜಕಾರಣವನ್ನೂ ಮುಂದಿಟ್ಟುಕೊಂಡು ಸಾಗುತ್ತಿರುವ ಸತೀಶ ಜಾರಕಿಹೊಳಿ, ಬುದ್ಧ, ಬಸವ, ಅಂಬೇಡ್ಕರ ವಿಚಾರಗಳನ್ನು ರಾಜ್ಯಾದ್ಯಂತ ಪ್ರಚಾರ ಮಾಡುತ್ತಾ ತಮ್ಮದೇ ವಿಭಿನ್ನ ರಾಜಕೀಯ ಗುರುತನ್ನು ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ಕೇವಲ ಪ್ರಾದೇಶಿಕ ನಾಯಕನಾಗಿ ಮಾತ್ರವಲ್ಲದೆ, ರಾಜ್ಯಮಟ್ಟದ ಸಂಘಟನಾ ನಾಯಕರಾಗಿ ಬೆಳೆಸುವ ಚಿಂತನೆ ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಇದೆ ಎನ್ನಲಾಗುತ್ತಿದೆ.

ಸತೀಶ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಗಳಿವೆ ಎಂದು ಪಕ್ಷದ ಕೆಲವು ನಾಯಕರು ಹೇಳುತ್ತಿದ್ದಾರೆ. ಈ ಮೂಲಕ ಸರಕಾರ ಮತ್ತು ಪಕ್ಷ ಎರಡರಲ್ಲೂ ಅಹಿಂದ ಸಮೀಕರಣ ಬಲಪಡಿಸುವ ಪ್ರಯತ್ನ ನಡೆಯಬಹುದು ಎಂಬ ಲೆಕ್ಕಾಚಾರ ವ್ಯಕ್ತವಾಗುತ್ತಿದೆ.

ಡಿ.ಕೆ. ಶಿವಕುಮಾರ ಮುಂದಿನ ನಡೆ ಏನು ?

ಕೆಪಿಸಿಸಿ ಅಧ್ಯಕ್ಷರಾಗಿ ಈಗಾಗಲೇ 6 ವರ್ಷ ಪೂರೈಸಿರುವ ಡಿ.ಕೆ. ಶಿವಕುಮಾರ ಅವರು, ಇತ್ತೀಚಿನ ತಿಂಗಳುಗಳಲ್ಲಿ ಹೊಸಬರಿಗೆ ಅವಕಾಶ ನೀಡುವ ಕುರಿತು ಹಲವು ಬಾರಿ ಸೂಚನೆ ನೀಡಿದ್ದಾರೆ. ಮಾರ್ಚ್ 10ರಂದು ನಡೆದ ಔತಣಕೂಟದಲ್ಲಿಯೂ ಅವರು ಪರೋಕ್ಷವಾಗಿ ಅಧಿಕಾರ ಹಂಚಿಕೆ ಕುರಿತು ಮಾತನಾಡಿದ್ದರು.

ಮುಖ್ಯಮಂತ್ರಿ ಸ್ಥಾನ ಅವರಿಗೆ ಸಿಕ್ಕಲ್ಲಿ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆ ವೇಗ ಪಡೆಯುವ ಸಾಧ್ಯತೆ ಇದೆ. ಚುನಾವಣೆಗೆ ಮುನ್ನ ಪಕ್ಷ ಸಂಘಟನೆಗೆ ಪೂರ್ಣಕಾಲಿಕ ಅಧ್ಯಕ್ಷರ ಅವಶ್ಯಕತೆ ಇದೆ ಎಂಬ ಅಭಿಪ್ರಾಯ ಕಾಂಗ್ರೆಸ್ ಒಳವಲಯದಲ್ಲಿ ವ್ಯಕ್ತವಾಗುತ್ತಿದೆ.

2028 ಚುನಾವಣೆಯತ್ತ ಕಾಂಗ್ರೆಸ್ ಗಮನ

ಮುಂದಿನ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ಗೆ ಅತ್ಯಂತ ಮಹತ್ವದ್ದಾಗಿರುವುದರಿಂದ ಈಗಿನಿಂದಲೇ ಚುನಾವಣಾ ಸಿದ್ಧತೆ ಆರಂಭಿಸುವ ಚಿಂತನೆ ನಡೆದಿದೆ. ಸರಕಾರದ ಆಡಳಿತ ಹಾಗೂ ಪಕ್ಷ ಸಂಘಟನೆ ನಡುವೆ ಸಮನ್ವಯ ಸಾಧಿಸುವ ನಾಯಕತ್ವ ಅಗತ್ಯವಿದೆ ಎಂದು ಹೈಕಮಾಂಡ್ ಭಾವಿಸಿದೆ ಎನ್ನಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ 2028ರ ಚುನಾವಣೆಯನ್ನು ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಎದುರಿಸುವ ತಂತ್ರ ರೂಪುಗೊಳ್ಳುತ್ತಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿವೆ.

ಸತೀಶ ಜಾರಕಿಹೊಳಿ ಈಗಾಗಲೇ ಸಚಿವ ಸ್ಥಾನ ತ್ಯಾಗಕ್ಕೂ ತಾವು ಸಿದ್ಧ ಎಂದು ಹೇಳಿರುವುದು, ಪಕ್ಷ ಸಂಘಟನೆ ಹೊಣೆ ಹೊರುವ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಹಿಂದ ಮತಬ್ಯಾಂಕ್ ಮೇಲೆ ಕಣ್ಣಿಟ್ಟ ಕಾಂಗ್ರೆಸ್

ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದ ನಾಯಕತ್ವ ಹಾಗೂ ಜೆಡಿಎಸ್‌ನಲ್ಲಿ ಒಕ್ಕಲಿಗ ಸಮುದಾಯದ ಪ್ರಭಾವ ಇರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಅಹಿಂದ ಮತಬ್ಯಾಂಕ್ ಮತ್ತಷ್ಟು ಗಟ್ಟಿಗೊಳಿಸುವತ್ತ ಗಮನ ಹರಿಸಿದೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರನ್ನು ಒಗ್ಗೂಡಿಸುವ ಮುಖವಾಗಿ ಸತೀಶ ಜಾರಕಿಹೊಳಿ ಅವರನ್ನು ಮುಂದಿರಿಸುವ ಸಾಧ್ಯತೆಗಳಿವೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಶಿಗ್ಗಾಂವಿ ಹಾಗೂ ಬಾಗಲಕೋಟೆ ಉಪಚುನಾವಣೆ ಸಂದರ್ಭದಲ್ಲೂ ತಮ್ಮ ರಾಜಕೀಯ ಸಾಮರ್ಥ್ಯ ತೋರಿಸಿದ್ದ ಅವರು, ಅಲ್ಪಸಂಖ್ಯಾತ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗುತ್ತಿದೆ. ಈಗ ಹಿಂದುಳಿದ ವರ್ಗಗಳತ್ತ ಹೆಚ್ಚಿನ ಒಲವು ಮೂಡಿಸುವ ರಾಜಕೀಯ ಕಾರ್ಯತಂತ್ರದಲ್ಲೂ ಅವರು ತೊಡಗಿದ್ದಾರೆ.

ಸತೀಶ ಪ್ರತಿಕ್ರಿಯೆ ಏನು ?

ಈ ಎಲ್ಲಾ ಬೆಳವಣಿಗೆಗಳ ನಡುವೆ ಸಮದರ್ಶಿ ಜೊತೆ ಮಾತನಾಡಿದ ಸತೀಶ ಜಾರಕಿಹೊಳಿ ಅವರು, ನಾನು ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು, ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅವರ ಈ ಹೇಳಿಕೆ ಕಾಂಗ್ರೆಸ್ ಒಳರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಇನ್ನಷ್ಟು ಮಹತ್ವದ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳಿವೆ.

 

 

 

 

 

 

 

 

 

 

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST