LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಕೋಮು ಗಲಭೆ ತಡೆಯಲು ಸಿದ್ದರಾಮಯ್ಯ ನೀಡಿದ್ದ ಸೂಚನೆ ನೆನೆದ ಸೆಂಥಿಲ್

ಬೆಂಗಳೂರು, ಮೇ 30 : ಮಾಜಿ ಐಎಎಸ್ ಅಧಿಕಾರಿ ಹಾಗೂ ಕಾಂಗ್ರೆಸ್ ಸಂಸದ ಶಶಿಕಾಂತ ಸೆಂಥಿಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಶೈಲಿ, ಸಾಮಾಜಿಕ ನ್ಯಾಯದ ಬದ್ಧತೆ ಹಾಗೂ ಅಧಿಕಾರಿಗಳಿಗೆ ನೀಡುತ್ತಿದ್ದ ಬೆಂಬಲವನ್ನು ಸ್ಮರಿಸಿ ಭಾವನಾತ್ಮಕ ಬರಹವೊಂದನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿರುವ ಅವರು, ತಮ್ಮ ಆಡಳಿತಾತ್ಮಕ ಜೀವನದಲ್ಲಿ ಅಳಿಸಲಾಗದ ನೆನಪಾಗಿ ಉಳಿದಿರುವ ಘಟನೆಯೊಂದನ್ನು ವಿವರಿಸಿದ್ದಾರೆ.

ತಮ್ಮನ್ನು ಜಿಲ್ಲಾಧಿಕಾರಿಯಾಗಿ ಮಂಗಳೂರಿಗೆ ವರ್ಗಾಯಿಸಿದ್ದ ಸಂದರ್ಭವನ್ನು ನೆನಪಿಸಿಕೊಂಡಿರುವ ಸೆಂಥಿಲ್, ಆ ಸಮಯದಲ್ಲಿ ಕೋಮು ಸಂಘರ್ಷಗಳು ಮತ್ತು ಮರಳು ಮಾಫಿಯಾದ ಚಟುವಟಿಕೆಗಳು ಹೆಚ್ಚಾಗಿದ್ದವು. ಮಂಗಳೂರಿಗೆ ತೆರಳುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ಭೇಟಿಗೆ ಕರೆದಿದ್ದರು ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯನ್ನು ಮುಖ್ಯಮಂತ್ರಿ ವೈಯಕ್ತಿಕವಾಗಿ ಕರೆಯುವುದು ಅಪರೂಪವಾಗಿದ್ದು, ಸ್ವಲ್ಪ ಆತಂಕದೊಂದಿಗೆ ಅವರ ಕಚೇರಿಗೆ ತೆರಳಿದ್ದೆ. ಆಗ ಸಿದ್ದರಾಮಯ್ಯ ಅವರು ಎಂದಿನ ಶಾಂತ ಧೋರಣಿಯಲ್ಲಿ, ಇನ್ನು ಮುಂದೆ ಮಂಗಳೂರಿನಲ್ಲಿ ಕೋಮು ಗಲಭೆಗಳು ನಡೆಯಬಾರದು. ನಿಮ್ಮ ಪ್ರಮುಖ ಜವಾಬ್ದಾರಿ ಅದೇ ಎಂದು ಸ್ಪಷ್ಟವಾಗಿ ಹೇಳಿದ್ದರು ಎಂದು ಸೆಂಥಿಲ್ ಸ್ಮರಿಸಿದ್ದಾರೆ.

ಆ ಮಾತುಗಳಲ್ಲಿ ಯಾವುದೇ ರಾಜಕೀಯ ಉದ್ದೇಶ ಅಥವಾ ಅಲಂಕಾರಿಕ ಭಾಷಣ ಇರಲಿಲ್ಲ. ಅದು ನೇರವಾದ ಆಡಳಿತಾತ್ಮಕ ಸಂದೇಶವಾಗಿತ್ತು. ಒಬ್ಬ ಮುಖ್ಯಮಂತ್ರಿ ಯುವ ಅಧಿಕಾರಿಗೆ ನಿಜವಾಗಿಯೂ ಮುಖ್ಯವಾದ ವಿಷಯವನ್ನು ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದರು ಎಂದು ಅವರು ಹೇಳಿದ್ದಾರೆ.

ಆ ಒಂದು ಮಾತಿನಲ್ಲೇ ಆಡಳಿತದ ತತ್ವ, ರಾಜಕೀಯ ದೃಷ್ಟಿಕೋನ ಹಾಗೂ ಸಾಮಾನ್ಯ ಜನರನ್ನು ಕೋಮು ದ್ವೇಷದಿಂದ ರಕ್ಷಿಸುವ ಬದ್ಧತೆ ಅಡಗಿತ್ತು ಎಂದು ಸೆಂಥಿಲ್ ಅಭಿಪ್ರಾಯಪಟ್ಟಿದ್ದಾರೆ.

ಸುಮಾರು ಹದಿನೈದು ದಿನಗಳ ಬಳಿಕ ಮಂಗಳೂರಿನಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡು ಸಮುದಾಯಗಳಿಗೆ ಸೇರಿದ ಇಬ್ಬರು ಹತ್ಯೆಯಾಗಿದ್ದು, ನಗರದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಆಗ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಕರೆ ಮಾಡಿ, ಜಿಲ್ಲಾಧಿಕಾರಿಯಾಗಿ ಅಗತ್ಯ ಕ್ರಮ ಕೈಗೊಳ್ಳಿ. ಯಾರನ್ನಾದರೂ ಬಂಧಿಸಬೇಕಾದರೆ ಬಂಧಿಸಿ. ಅವರು ನಮ್ಮ ಪಕ್ಷದವರಾಗಿದ್ದರೂ ಹಿಂದೇಟು ಹಾಕಬೇಡಿ. ಆದರೆ ಒಂದು ದಿನದೊಳಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕು ಎಂದು ಸೂಚಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಆ ಮಾತುಗಳು ಯುವ ಜಿಲ್ಲಾಧಿಕಾರಿಯಾಗಿ ನನಗೆ ಅಪಾರ ಆತ್ಮವಿಶ್ವಾಸ ನೀಡಿದ್ದವು. ಅದು ಕೇವಲ ಆದೇಶವಾಗಿರದೆ, ರಾಜಕೀಯ ಇಚ್ಛಾಶಕ್ತಿ ಮತ್ತು ಸಂಪೂರ್ಣ ಬೆಂಬಲದ ಸಂಕೇತವಾಗಿತ್ತು ಎಂದು ಸೆಂಥಿಲ್ ಹೇಳಿದ್ದಾರೆ.

ಇದಕ್ಕೆ ವಿರುದ್ಧವಾದ ಅನುಭವಗಳನ್ನೂ ತಾವು ಕಂಡಿರುವುದಾಗಿ ಉಲ್ಲೇಖಿಸಿರುವ ಅವರು, ಮತ್ತೊಂದು ಆಡಳಿತಾವಧಿಯಲ್ಲಿ ಇದೇ ರೀತಿಯ ಪರಿಸ್ಥಿತಿಯಲ್ಲಿ ಯಾವುದೇ ಕಠಿಣ ಕ್ರಮ ಕೈಗೊಳ್ಳಬೇಡಿ, ಪರಿಸ್ಥಿತಿ ಹಾಗೆಯೇ ಇರಲಿ ಎಂಬ ಸೂಚನೆ ಬಂದಿತ್ತು ಎಂದು ತಿಳಿಸಿದ್ದಾರೆ.

ಯಾರು ಯಾರಿಗಾಗಿ ಆಡಳಿತ ನಡೆಸುತ್ತಾರೆ ಎಂಬುದನ್ನು ಇಂತಹ ಸಂದರ್ಭಗಳು ಸ್ಪಷ್ಟಪಡಿಸುತ್ತವೆ. ಸಿದ್ದರಾಮಯ್ಯ ಅವರು ಎಂದಿಗೂ ಆ ರೀತಿಯ ನಾಯಕನಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ರಾಜ್ಯದ ಹಣಕಾಸಿನ ಸ್ಥಿತಿಗತಿಗಳನ್ನು ಸಂಪೂರ್ಣವಾಗಿ ತಿಳಿದಿದ್ದ ನಾಯಕರಾಗಿದ್ದರು. ಪ್ರತಿ ನಿರ್ಧಾರದಲ್ಲೂ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡುತ್ತಿದ್ದರು. ಸಮಾಜದ ತಳಮಟ್ಟದ ಜನರ ಪರವಾಗಿ ದೃಢವಾಗಿ ನಿಲ್ಲುವ ಗುಣ ಅವರಲ್ಲಿತ್ತು ಎಂದು ಸೆಂಥಿಲ್ ಬರೆದಿದ್ದಾರೆ.

ತಾವು ನಿಜವಾಗಿಯೂ ಗೌರವಿಸುವ ರಾಜಕೀಯ ನಾಯಕರಲ್ಲಿ ಸಿದ್ದರಾಮಯ್ಯ ಪ್ರಮುಖರು. ಅವರ ಪರಂಪರೆ ಅವರು ಘೋಷಿಸಿದ ಯೋಜನೆಗಳಲ್ಲಿ ಅಥವಾ ಮಂಡಿಸಿದ ಬಜೆಟ್‌ಗಳಲ್ಲಿ ಮಾತ್ರ ಇಲ್ಲ. ಅಧಿಕಾರಿಗಳಿಗೆ ಧೈರ್ಯ ತುಂಬುವ ಅವರ ನಡೆ, ಸಂಕಷ್ಟದ ಸಂದರ್ಭಗಳಲ್ಲಿ ನೀಡಿದ ಬೆಂಬಲ ಮತ್ತು ಶಾಂತಿ ಕಾಪಾಡುವಂತೆ ಯುವ ಅಧಿಕಾರಿಗಳಿಗೆ ನೀಡಿದ ಮಾರ್ಗದರ್ಶನದಲ್ಲಿಯೇ ಅವರ ನಿಜವಾದ ನಾಯಕತ್ವ ಅಡಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಿದ್ದರಾಮಯ್ಯ ಅವರು ಈಗ ಅದೇ ಘನತೆಯೊಂದಿಗೆ ತಮ್ಮ ಹುದ್ದೆಯಿಂದ ಕೆಳಗಿಳಿಯುತ್ತಿರುವಾಗ ಮನಸ್ಸು ಭಾವುಕವಾಗುತ್ತದೆ. ತಾವು ನಂಬಿದ ತತ್ವಗಳು ಯಾವುದೇ ಹುದ್ದೆಗಿಂತ ದೊಡ್ಡವು ಎಂಬುದನ್ನು ಅವರು ಯಾವಾಗಲೂ ಅರ್ಥಮಾಡಿಕೊಂಡಿದ್ದರು ಎಂದು ಸೆಂಥಿಲ್ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ದೀರ್ಘಕಾಲ ಆರೋಗ್ಯದಿಂದಿರಲಿ. ತಮ್ಮ ಅನುಭವ ಮತ್ತು ಮಾರ್ಗದರ್ಶನದ ಮೂಲಕ ದೇಶ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಕೊಡುಗೆ ನೀಡಲಿ ಎಂದು ಸೆಂಥಿಲ್ ಶುಭ ಹಾರೈಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ