ಹೊಸದಿಲ್ಲಿ, ಜೂ. 12 : ಒಮಾನ್ ಕರಾವಳಿಯ ಸಮೀಪ ವಾಣಿಜ್ಯ ಹಡಗು ಸೆಟ್ಬೆಲ್ಲೊ ಮೇಲೆ ನಡೆದ ದಾಳಿಯ ಬಳಿಕ ಕಾಣೆಯಾಗಿರುವ ಮೂವರು ಭಾರತೀಯ ಸಿಬ್ಬಂದಿಯಲ್ಲಿ ಒಬ್ಬರ ತಂದೆಯ ಮನವಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪುತ್ರನಿಗಾಗಿ ನೆರವು ಕೋರಿದ ಅವರ ಸಂದೇಶದ ಜೊತೆಗೆ, ಈ ಹಿಂದೆ ಅವರು ಮಾಡಿದ್ದ ಕೆಲವು ಪೋಸ್ಟ್ಗಳು ಮತ್ತೆ ಮುನ್ನಲೆಗೆ ಬಂದಿವೆ.
ಪತ್ರಕರ್ತ ಆದಿತ್ಯ ರಾಜ್ ಕೌಲ್ ಅವರು ಜೂನ್ 10ರಂದು ಪ್ರಕಟಿಸಿದ್ದ ಪೋಸ್ಟ್ನಲ್ಲಿ, ಹಡಗಿನಲ್ಲಿದ್ದ 24 ಭಾರತೀಯ ಸಿಬ್ಬಂದಿಗಳ ಪೈಕಿ 21 ಮಂದಿಯನ್ನು ರಕ್ಷಿಸಲಾಗಿದ್ದು, ಮೂವರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಉಲ್ಲೇಖಿಸಿದ್ದರು. ಈ ಸಂಬಂಧ ಭಾರತವು ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿಗಳ ಗಮನಕ್ಕೂ ವಿಷಯವನ್ನು ತಂದಿದ್ದು, ದಾಳಿಯನ್ನು ಖಂಡಿಸಿದೆ ಎಂದು ಅವರು ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರಾಜೇಶ್ ಶರ್ಮಾ, ಕಾಣೆಯಾಗಿರುವ ಮೂವರು ಸಿಬ್ಬಂದಿಯಲ್ಲಿ ತಮ್ಮ ಪುತ್ರ ಆದಿತ್ಯ ಶರ್ಮಾ ಕೂಡ ಒಬ್ಬರು ಎಂದು ತಿಳಿಸಿದ್ದಾರೆ. ಕಾಣೆಯಾಗಿರುವ ನಾವಿಕನ ತಂದೆ ತಾನಾಗಿದ್ದು, ಪುತ್ರನನ್ನು ಪತ್ತೆಹಚ್ಚಲು ನೆರವು ನೀಡುವಂತೆ ಮನವಿ ಮಾಡಿದ್ದರು.
ಇದೇ ವೇಳೆ, ಹಡಗಿನಲ್ಲಿ ಹಿರಿಯ ಅಧಿಕಾರಿಯೊಬ್ಬರಿಂದ ಪುತ್ರ ಶೋಷಣೆಗೆ ಒಳಗಾಗಿದ್ದನು ಎಂದು ಆರೋಪಿಸಿರುವ ಅವರು, ಎಪ್ರಿಲ್ ತಿಂಗಳಲ್ಲೇ ಹಡಗನ್ನು ತೊರೆಯಲು ಪುತ್ರ ಬಯಸಿದ್ದ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇವೆ ಎಂದು ಹೇಳಿದ್ದರು.
ಈ ಮನವಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, 2023ರಲ್ಲಿ ಇಸ್ರೇಲ್–ಹಮಾಸ್ ಯುದ್ಧದ ಸಂದರ್ಭದಲ್ಲಿ ರಾಜೇಶ್ ಶರ್ಮಾ ಮಾಡಿದ್ದ ಕೆಲವು ಪೋಸ್ಟಗಳು ಮತ್ತೆ ಚರ್ಚೆಗೆ ಬಂದಿವೆ. ಆ ಪೋಸ್ಟಗಳು ಇಸ್ರೇಲ್ ದಾಳಿಯ ಪರ ನಿಲುವು ವ್ಯಕ್ತಪಡಿಸಿದ್ದಲ್ಲದೆ, ಗಾಝಾ ಹಾಗೂ ಯುದ್ಧದ ಕುರಿತು ಮುಸ್ಲಿಮರ ಬಗ್ಗೆ ವಿವಾದಾತ್ಮಕ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.
ಈ ಹಳೆಯ ಪೋಸ್ಟಗಳನ್ನು ಉಲ್ಲೇಖಿಸಿ ಹಲವರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಪುತ್ರನ ನಾಪತ್ತೆ ಹಾಗೂ ಕುಟುಂಬದ ನೋವಿನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಹಿಂದಿನ ಹೇಳಿಕೆಗಳನ್ನು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರ ಸಂದೀಪ ಮನುಧಾನೆ, ಪುತ್ರನ ನಾಪತ್ತೆ ದುಃಖಕರ ಸಂಗತಿ. ಆದರೆ ಹಿಂದೆ ಯುದ್ಧ ಮತ್ತು ಹಿಂಸೆಗೆ ಬೆಂಬಲ ವ್ಯಕ್ತವಾಗಿದ್ದ ಪೋಸ್ಟಗಳು ಈಗ ಚರ್ಚೆಗೆ ಕಾರಣವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಬ್ಬ ಬಳಕೆದಾರ ರೌದ್ರ, ಯುದ್ಧ ಮತ್ತು ಹಿಂಸೆಯ ಪರಿಣಾಮಗಳು ಅನಿರೀಕ್ಷಿತವಾಗಿ ಕುಟುಂಬಗಳನ್ನೂ ತಟ್ಟಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಬಳಕೆದಾರ ಕೇಟೊ8, ತಂದೆಯಾಗಿ ರಾಜೇಶ ಶರ್ಮಾ ಅವರ ನೋವಿನ ಬಗ್ಗೆ ಸಹಾನುಭೂತಿ ಇದ್ದರೂ, ಅವರ ಹಿಂದಿನ ಹೇಳಿಕೆಗಳು ವಿವಾದಾತ್ಮಕವಾಗಿದ್ದವು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ. ಹಲವರು ನಾಪತ್ತೆಯಾಗಿರುವ ನಾವಿಕ ಮತ್ತು ಅವರ ಕುಟುಂಬದ ಸಂಕಷ್ಟದ ಸಂದರ್ಭದಲ್ಲಿ ರಾಜಕೀಯ ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮುಂದಿಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಕೆಲವರು ಹಿಂದಿನ ಪೋಸ್ಟಗಳನ್ನು ಉಲ್ಲೇಖಿಸಿ ಯುದ್ಧ ಮತ್ತು ದ್ವೇಷದ ಕುರಿತ ನಿಲುವುಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.