ಆಗ್ರಾ, ಮೇ 21 : ಕುಟುಂಬದ ವಿರೋಧದ ನಡುವೆಯೂ ಪ್ರಿಯಕರನ ಜತೆ ಮಾತನಾಡುತ್ತಿದ್ದ ಕಾರಣಕ್ಕೆ ತಂದೆಯೇ ಪುತ್ರಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ ಘಟನೆ ಅಲಿಗಢ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಅರೆಪ್ರಜ್ಞಾವಸ್ಥೆಯಲ್ಲಿದ್ದ ಪುತ್ರಿಯನ್ನು ಹಗ್ಗದಿಂದ ತನ್ನ ಬೆನ್ನಿಗೆ ಕಟ್ಟಿಕೊಂಡು ಮೋಟರ್ ಸೈಕಲ್‌ನಲ್ಲಿ ರಸ್ತೆಯುದ್ದಕ್ಕೂ ಎಳೆದೊಯ್ದ ಆರೋಪಿಯು ಬಳಿಕ ಮೈದಾನವೊಂದಕ್ಕೆ ತಲುಪಿ ಹತ್ಯೆ ನಡೆಸಿ, ಸುಮಾರು 5 ಅಡಿ ಆಳದ ಹೊಂಡ ತೋಡಿ ಶವವನ್ನು ಹೂತುಹಾಕಿದ್ದಾನೆ ಎನ್ನಲಾಗಿದೆ. ಬಳಿಕ ಬುಧವಾರ ಮುಂಜಾನೆ ಪುತ್ರಿ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.
ಖೈರ್ ಪೊಲೀಸ್ ಠಾಣೆ ವ್ಯಾಪ್ತಿಯ ಜರಾರಾ ಗ್ರಾಮದಲ್ಲಿ ಈ ಶಂಕಿತ ಮರ್ಯಾದಾ ಹತ್ಯೆ ನಡೆದಿದ್ದು, ಆರೋಪಿಯನ್ನು ಪುರಾನ್ ಸಿಂಗ್ ಎಂದು ಗುರುತಿಸಲಾಗಿದೆ. ಮೃತ ಯುವತಿಯನ್ನು ಶಿವಾನಿ ಎಂದು ಗುರುತಿಸಲಾಗಿದೆ.
ಶಿವಾನಿ ಅದೇ ಗ್ರಾಮದ ಯುವಕನೊಬ್ಬನ ಜತೆ ಕಳೆದ ಒಂದು ವರ್ಷದಿಂದ ಪ್ರೇಮಸಂಬಂಧ ಹೊಂದಿದ್ದು, ಆತನ ಜತೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ನೆರೆಮನೆಯ ಯುವಕನ ಜತೆ ಸಂಬಂಧ ಹೊಂದಿದ್ದ ಕಾರಣಕ್ಕೆ ಪುತ್ರಿಯನ್ನು ಹತ್ಯೆ ಮಾಡಿರುವುದಾಗಿ ವಿಚಾರಣೆ ವೇಳೆ ಪುರಾನ್ ಸಿಂಗ್ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಬಗ್ಗೆ ಯಾರಿಗೂ ಅನುಮಾನ ಬಾರದಿರಲೆಂದು ಪುತ್ರಿಯನ್ನು ಹತ್ಯೆ ಮಾಡಿ ಹೂತುಹಾಕಿದ ಬಳಿಕವೂ ಪುರಾನ್ ಸಿಂಗ್ ಮಗಳನ್ನು ಹುಡುಕುವ ನಾಟಕ ಮಾಡಿದ್ದಾನೆ ಎನ್ನಲಾಗಿದೆ. ಆದರೆ ಸತತ ಹುಡುಕಾಟದ ಬಳಿಕವೂ ಶಿವಾನಿ ಪತ್ತೆಯಾಗದೇ ಇದ್ದಾಗ ಸ್ಥಳೀಯರಿಗೆ ಅನುಮಾನ ಮೂಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ ಪುರಾನ್ ಸಿಂಗ್ ವಿರೋಧಾಭಾಸದ ಹೇಳಿಕೆಗಳನ್ನು ನೀಡಿದ್ದಲ್ಲದೆ, ಪುತ್ರಿ ಅಸ್ವಸ್ಥತೆಯಿಂದ ಮೃತಪಟ್ಟಿದ್ದಾಳೆ ಎಂದು ಹೇಳಿದ್ದ. ಬಳಿಕ ತೀವ್ರ ವಿಚಾರಣೆ ನಡೆಸಿದಾಗ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡು, ಶವ ಹೂತುಹಾಕಿದ್ದ ಸ್ಥಳವನ್ನೂ ಪೊಲೀಸರಿಗೆ ತೋರಿಸಿದ್ದಾನೆ.
ಗ್ರಾಮಸ್ಥರ ಸಮ್ಮುಖದಲ್ಲಿ ಶಿವಾನಿಯ ಮೃತದೇಹವನ್ನು ಹೊರತೆಗೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.