ಹೊಸದಿಲ್ಲಿ, ಮೇ 14 : ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಬಳಿಕ ಮುಖ್ಯಮಂತ್ರಿ ಆಯ್ಕೆ ಕುರಿತಾಗಿ ಕಳೆದ 10 ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ತೆರೆ ಬಿದ್ದಿದ್ದು, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರನ್ನು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ.
61 ವರ್ಷದ ವಿ.ಡಿ.ಸತೀಶನ್ ಕೇರಳದ ಪ್ರಭಾವಿ ನಾಯರ್ ಸಮುದಾಯಕ್ಕೆ ಸೇರಿದವರಾಗಿದ್ದು, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಎಲ್‌ಡಿಎಫ್ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಿ ಪಕ್ಷದ ಜನಾಧಾರ ವಿಸ್ತರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಮುಖ್ಯಮಂತ್ರಿ ಹುದ್ದೆಗಾಗಿ ವಿ.ಡಿ.ಸತೀಶನ್, ಕೆ.ಸಿ.ವೇಣುಗೋಪಾಲ್ ಹಾಗೂ ರಮೇಶ್ ಚೆನ್ನಿತ್ತಲ ನಡುವೆ ಪೈಪೋಟಿ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಸತೀಶನ್ ಪರ ತೀರ್ಮಾನ ಕೈಗೊಂಡಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷವು ಮೇ 7ರಂದು ತಿರುವನಂತಪುರದಲ್ಲಿ ಸಭೆ ಸೇರಿ ನಾಯಕನ ಆಯ್ಕೆಯ ಅಧಿಕಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿತ್ತು. ಬಳಿಕ ರಾಹುಲ್ ಗಾಂಧಿ ಸೇರಿದಂತೆ ಉನ್ನತ ನಾಯಕತ್ವ ಹಲವು ಸುತ್ತಿನ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಂಡಿತು.
ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕಿ ದೀಪಾ ದಾಸ್‌ಮುನ್ಶಿ, ವಿ.ಡಿ.ಸತೀಶನ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.
ಯುಡಿಎಫ್ ಮೈತ್ರಿಕೂಟದ ಭರ್ಜರಿ ಗೆಲುವಿನ ಪ್ರಮುಖ ರೂವಾರಿಗಳಲ್ಲಿ ಸತೀಶನ್ ಒಬ್ಬರಾಗಿದ್ದರು. ಆಕ್ರಮಣಕಾರಿ ಪ್ರಚಾರ, ಚುನಾವಣಾ ತಂತ್ರ ಹಾಗೂ ಮೈತ್ರಿ ಪಕ್ಷಗಳ ಸಮನ್ವಯದಲ್ಲಿ ಅವರು ಯಶಸ್ವಿಯಾಗಿದ್ದರು. ಎಲ್‌ಡಿಎಫ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯದ ವಿಚಾರದಲ್ಲಿ ನಿರಂತರ ವಾಗ್ದಾಳಿ ನಡೆಸುವ ಮೂಲಕ ಜನಮನ ಸೆಳೆದಿದ್ದರು.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸೇರಿದಂತೆ ಮೈತ್ರಿ ಪಕ್ಷಗಳೂ ಸತೀಶನ್ ಪರ ಬೆಂಬಲ ವ್ಯಕ್ತಪಡಿಸಿದ್ದವು. ಶಾಸಕರ ಬಹುಪಾಲು ಬೆಂಬಲವೂ ಅವರ ಪರ ಒಲಿದ ಹಿನ್ನೆಲೆಯಲ್ಲಿ ಅವರು ಮುನ್ನಡೆ ಸಾಧಿಸಿದರು.
ಮುಖ್ಯಮಂತ್ರಿ ಆಯ್ಕೆ ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ಕೇರಳದ ಹಲವು ಭಾಗಗಳಲ್ಲಿ ನಾಯಕರ ಪರ-ವಿರೋಧ ಪೋಸ್ಟರ್‌ಗಳು ಕಾಣಿಸಿಕೊಂಡು ಕಾಂಗ್ರೆಸ್‌ನ ಒಳಜಗಳ ಬಹಿರಂಗವಾಗಿತ್ತು.
ವಿ.ಡಿ.ಸತೀಶನ್ ಆಯ್ಕೆ ಘೋಷಣೆಯಾದ ತಕ್ಷಣ ತಿರುವನಂತಪುರಂ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.