ಉಕ್ಕಿ ಹರಿಯುತ್ತಿರುವ ಪಂಚನದಿಗಳು: ಬೆಳಗಾವಿ ಜಿಲ್ಲೆಯ 8 ಸೇತುವೆಗಳ ಮುಳುಗಡೆ, 18 ಗ್ರಾಮಗಳ ಸಂಪರ್ಕ ಬಂದ್

A B Dharwadkar
ಉಕ್ಕಿ ಹರಿಯುತ್ತಿರುವ ಪಂಚನದಿಗಳು:  ಬೆಳಗಾವಿ ಜಿಲ್ಲೆಯ  8 ಸೇತುವೆಗಳ ಮುಳುಗಡೆ, 18 ಗ್ರಾಮಗಳ ಸಂಪರ್ಕ ಬಂದ್

ಬೆಳಗಾವಿ: ಬೆಳಗಾವಿಯ ಜಿಲ್ಲೆಯಲ್ಲಿ ಹರಿಯುವ ಪಂಚನದಿಗಳಾದ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ವೇದಗಂಗಾ, ಮತ್ತು ದೂಧಗಂಗಾ ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, 8 ಸೇತುವೆಗಳು ಮುಳುಗಡೆ ಆಗಿ, 18 ಗ್ರಾಮಗಳ ಸಂಪರ್ಕ ಬಂದ್ ಆಗಿದೆ.

ಚಿಕ್ಕೋಡಿ ತಾಲೂಕಿನಲ್ಲಿನ 8 ಕೆಳ ಹಂತದ ಸೇತುವೆಗಳು ಒಂದೇ ರಾತ್ರಿ ಜಲಾವೃತಗೊಂಡಿವೆ. ಇದರಿಂದ ತಾಲೂಕಿನಲ್ಲಿ 18 ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜನರು ಪರ್ಯಾಯ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದಾರೆ.

ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಶಿ, ಬಾರವಾಡ-ಕುನ್ನೂರ ಸೇತುವೆ ಜಲಾವೃತಗೊಂಡಿದೆ. ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್, ಬೋಜವಾಡಿ-ಕುನ್ನೂರ, ಮಲ್ಲಿಕವಾಡ-ದತ್ತವಾಡ ಸೇತುವೆ ಜಲಾವೃತಗೊಂಡಿದೆ.

ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಕ್ಸಂಬಾ-ದತ್ತವಾಡ, ಕಲ್ಲೋಳ-ಯಡೂರ ಮತ್ತು ಬಾವನಸೌದತ್ತಿ-ಮಾಂಜರಿ ಸೇತುವೆ ಮುಳುಗಡೆಯಾಗಿದೆ. ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ದೂದಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಗೆ ಅಡ್ಡಲಾಗಿ ಕಟ್ಟಿರುವ ಮಲಿಕವಾಡ-ದತ್ತವಾಡ ಸೇತುವೆ ಎರಡೇ‌ ತಿಂಗಳಲ್ಲಿ ಆರನೇ ಬಾರಿಗೆ ಮುಳುಗಡೆಯಾಗಿದೆ.

ಜಿಲ್ಲಾಡಳಿತವು ನದಿ ದಂಡೆಯ ಉದ್ದಕ್ಕೂ ಇರುವ ಹಳ್ಳಿಗಳ ಜನರಿಗೆ ಮುನ್ನೆಚ್ಚರಿಕೆ ಎಚ್ಚರಿಕೆ ನೀಡಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ.

ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ರಕ್ಷಣಾ ತಂಡಗಳು ಜಾಗರೂಕವಾಗಿವೆ ಮತ್ತು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಭಾರೀ ಮಳೆಯಿಂದ ಬೆಳಗಾವಿ, ಖಾನಾಪುರ, ಬೈಲಹೊಂಗಲ, ನಿಪ್ಪಾಣಿ, ಸವದತ್ತಿ ಮತ್ತು ಕಿತ್ತೂರು ತಾಲ್ಲೂಕುಗಳಲ್ಲಿನ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.