ಹೆತ್ತವರು ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕಾಳಜಿ ತೋರಬೇಕು : ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ

A B Dharwadkar
ಹೆತ್ತವರು ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕಾಳಜಿ ತೋರಬೇಕು : ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ

ಹಾವೇರಿ: ಶಾಲಾ ಶಿಕ್ಷಣ ಜೊತೆಗೆ ಸಂತರ ಸನ್ನಿಧಿಯೊಂದಿಗೆ ಉತ್ತಮ ಸಂಸ್ಕಾರ ನೀಡಿದರೆ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಬಹುದು. ಹೆತ್ತವರು ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕಾಳಜಿ ತೋರಬೇಕು ಎಂದು ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ ಹೇಳಿದರು.

ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶವನ್ನು ಬೆಳಗಿಸಲು ಮಕ್ಕಳಿಗೆ ಉತ್ತಮ ಸಂಸ್ಕಾರ ಇಂದಿನ ಅಗತ್ಯ. ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಶಕ್ತಿ ಮಕ್ಕಳಲ್ಲಿರುತ್ತದೆ. ಸಂತರ ಜೊತೆಗೆ ಹೆಜ್ಜೆ ಹಾಕಿರುವ ತಾವೆಲ್ಲ ಶಿವನಾಮ ಸ್ಮರಣೆಯಿಂದ ಆತ್ಮಶಕ್ತಿಯನ್ನು ಜಾಗೃತಗೊಳಿಸಬಹುದು. ಯಾವ ಪಾಲಕರು ತಮ್ಮ ನೈಜಭಕ್ತಿಯಿಂದ ದೇವರನ್ನು ಸ್ಮರಿಸುವರೋ ಅಂಥವರ ಮಕ್ಕಳು ಸನ್ಮಾರ್ಗದತ್ತ ಸಾಗುವರು. ದೂರದರ್ಶನ ಮೂಲಕ ದೈವ ದರ್ಶನ, ಭಕ್ತಿ ದರ್ಶನ ಪಡೆಯಬಹುದು. ಆದರೆ ಹುಕ್ಕೇರಿ ಮಠದ ಶ್ರೀಗಳ ದರ್ಶನದಿಂದ ಧರ್ಮ ದರ್ಶನ ಪಡೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಭಕ್ತರು ತಮ್ಮ ಮಕ್ಕಳಲ್ಲಿ ಛಲ ಮತ್ತು ಬಲ ತುಂಬುವ ಕಾರ್ಯ ಮಾಡಲು ಮುಂದಾಗಬೇಕು ಎಂದರು.
ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಕುಟುಂಬದಲ್ಲಿ ಬಾಂಧವ್ಯದ ಬೆಸುಗೆ ಬೆಸೆಯಲು ಪ್ರೀತಿ, ವಿಶ್ವಾಸ ಹಾಗೂ ಸಾಮರಸ್ಯ ಭಾವವಿರಬೇಕು. ಅತ್ತೆ-ಸೊಸೆಯಂದಿರ ಕದನ ಕುತೂಹಲ ಪರಿಹರಿಸಲು ಸೊಸೆಯನ್ನು ಮಗಳ ಸ್ವರೂಪದಲ್ಲಿ ಮತ್ತು ಮಗಳನ್ನು ಸೊಸೆಯ ಭಾವದಲ್ಲಿ ಕಾಣಬೇಕು. ಅಂದಾಗ ಮಾತ್ರ ಸುಖಿ ಕುಟುಂಬ ಸಾಧ್ಯ. ಭಕ್ತರಿಗೆ ನೆಮ್ಮದಿ ಜೀವನ ರೂಪಿಸಲು ಸದಾಶಿವ ಸ್ವಾಮೀಜಿ ಮಾರ್ಗದರ್ಶನ ಮಾಡಲು ಪಾದಯಾತ್ರೆ ರೂಪದಲ್ಲಿ ಸಂಚರಿಸುತ್ತಿರುವರು. ಅಂದ ಹಾಗೂ ಆನಂದದ ಬದುಕು ನಮ್ಮದಾಗಲು ಶ್ರೀಗಳ ಆಶೀರ್ವಾದ ಪಡೆಯಬೇಕು. ಹಳ್ಳಿಗಳಿಗೆ ತೆರಳಿ ಚಟಗಳ ದೀಕ್ಷೆ ಕೇಳಿರುವ ಶ್ರೀಗಳ ಬೆಳ್ಳಿ ತುಲಾಭಾರ ನೆರವೇರಿಸಲು ಭಕ್ತರು ನಿರ್ಧರಿಸುವರು. ಶಾಲಾ ಮಕ್ಕಳಿಗೆ ಉಚಿತ ಪ್ರಸಾದ ನಿಲಯ ನಿರ್ಮಿಸಲು ಸಂಕಲ್ಪ ತೊಟ್ಟಿರುವ ಅವರಿಗೆ ತಮ್ಮ ಸಹಕಾರವಿರಲಿ ಎಂದರು.
ಕೋಟ್ ೦೧
ಗಾಳಿ ಬಿಟ್ಟಾಗ ತೂರಿಕೋ ಎಂದು ಶಿವಶರಣರು ತಿಳಿಸಿರುವರು. ನಿಮ್ಮ ದುಶ್ಚಟ-ದುರ್ಗುಣಗಳನ್ನು ತೂರಿದಾಗ ಶ್ರೀಮಠಕ್ಕೊಂದು ಹೆಸರು ಬರಲಿದೆ. ಭಕ್ತರು ಉತ್ತಮ ಜೀವನ ರೂಪಿಸಿಕೊಳ್ಳಲು ಶ್ರಮಿಸುವುದೇ ಪಾದಯಾತ್ರೆಯ ಉದ್ದೇಶ. ಐತಿಹಾಸಿಕ ಕಾರ್ಯಕ್ರಮವಾಗಲಿರುವ ಬಸವ ಬುತ್ತಿ ಭಕ್ತಿಯ ಬುತ್ತಿಯಾಗಲಿ.
ಸದಾಶಿವ ಸ್ವಾಮೀಜಿ, ಹುಕ್ಕೇರಿಮಠ ಹಾವೇರಿ.

ಬಸ್ತಿ ಓಣಿ, ಕಲ್ಲು ಮಂಟಪ ರಸ್ತೆ ಹಾಗೂ ದೊಡ್ಡ ಬಸವಣ್ಣ ದೇಗುಲ ಮಾರ್ಗದಲ್ಲಿ ಸಂಚರಿಸಿದ ಪಾದಯಾತ್ರೆ ಮಹಾತ್ಮ ಗಾಂಧಿ ವೃತ್ತದವರೆಗೆ ಸಾಗಿ ಬಂದಿತು. ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಕೂಡಲದ ಗುರು ಮಹೇಶ್ವರ ಸ್ವಾಮೀಜಿ, ವಿಜಯಪುರದ ಅಭಿನವ ಷಣ್ಮುಖರೂಢs ಸ್ವಾಮೀಜಿ, ರಾವೂರಿನ ಸಿದ್ಧಲಿಂಗ ಸ್ವಾಮೀಜಿ, ಹೇರೂರಿನ ನಂಜುAಡ ಪಂಡಿತಾರಾಧ್ಯ ಸ್ವಾಮೀಜಿ, ಆಸಂಗಿಯ ವೀರಬಸವ ದೇವರು ಪಾದಯಾತ್ರೆಯಲ್ಲಿ ಸಾಗಿದರು.
ಮಾಜಿ ಶಾಸಕ ಶಿವರಾಜ ಸಜ್ಜನ, ಸ್ಥಳೀಯರಾದ ಪಿ.ಡಿ. ಶಿರೂರ, ಶಿವಯೋಗಿ ಚರಂತಿಮಠ, ಶಂಭೋಜಿ ಜಾಧವ, ಚನ್ನಬಸಪ್ಪ ಅಂಗರಗಟ್ಟಿ, ಶಿವಲಿಂಗಪ್ಪ ಕಲ್ಯಾಣಿ, ಗದಿಗೆಪ್ಪ ನೆಲೋಗಲ್ಲ, ಜಗದೀಶ ಕನವಳ್ಳಿ, ಪ್ರಕಾಶ ಉಜನಿಕೊಪ್ಪ, ಲಲಿತಾ ಗುಂಡೇನಹಳ್ಳಿ, ಮಮತಾ ಜಾಬೀನ್, ವಿರೂಪಾಕ್ಷಪ್ಪ ಹತ್ತಿಮತ್ತೂರ, ಶಿವಪ್ಪ ಮುಗದೂರ, ಅಜ್ಜಪ್ಪ ಹಂದ್ರಾಳ, ಬಸವರಾಜ ತುಪ್ಪದ, ಶಿವಯೋಗಿ ಯರೇಶಿಮಿ ಇದ್ದರು.
ಹುಕ್ಕೇರಿ ಮಠದ ಭಕ್ತರು ತಮ್ಮ ಮನೆ ಹಾಗೂ ತಮ್ಮ ಓಣಿಗಳನ್ನು ಸ್ವಚ್ಛಗೊಳಿಸಿ ರಸ್ತೆ ಮಧ್ಯೆಯೇ ಬಣ್ಣ ಬಣ್ಣದ ಚಿತ್ತಾರಗಳನ್ನು ಮತ್ತು ತಮ್ಮ ಮನೆ ಎದುರು ಅಂದವಾದ ರಂಗೋಲಿ ಬಿಡಿಸಿದ್ದರು. ಅಷ್ಟೇ ಅಲ್ಲದೇ ಶಿವಬಸವ ಸ್ವಾಮೀಜಿ ಹಾಗೂ ಶಿವಲಿಂಗೇಶ್ವರ ಸ್ವಾಮೀಜಿ ಜೊತೆಗೆ ವಿಶ್ವಗುರು ಬಸವಣ್ಣ ಹಾಗೂ ಹಾನಗಲ್ಲ ಕುಮಾರಸ್ವಾಮಿಗಳ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು. ಸುಮಂಗಲೆಯರು ಕುಂಭ ಹೊತ್ತು ಸಾಗುವ ವೇಳೆ ಶಿವನೇ ಬಸವ. ಬಸವಾ ಶಿವನೇ ಎಂದು ಉಚ್ಚರಿಸುತ್ತ ಸಾಗಿದರು. ತಮ್ಮ ಮನೆ ಎದುರಿಗೆ ಶ್ರೀಗಳು ಬರುತ್ತಿದ್ದಂತೆ ಪುಷ್ಪಗಳನ್ನು ಅರ್ಪಿಸಿ ಭಕ್ತಿ ಸಮರ್ಪಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.