
ವರದಿ: ಗಂಗಾಧರ ಕುಲಕರ್ಣಿ
ಹಾವೇರಿ: ಯಾಲಕ್ಕಿ ನಗರಿ ಹಾವೇರಿಯಲ್ಲಿ ಕಳೆದ ಎರಡು ವಾರಗಳಿಂದ ಮೈಕೊರೆಯುವ ಚಳಿ ಹೆಚ್ಚಳವಾಗಿದ್ದು, ಬುಧವಾರ ಕನಿಷ್ಠ ತಾಪಮಾನ 11.0 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಜನರು ನಲಗುವಂತಾಗಿದೆ.
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಮಳೆ ಕುಂಭದ್ರೋಣವಾಗಿ ಸುರಿದು, ಕೆರೆ, ಕಟ್ಟೆ, ಹಳ್ಳ ಕೊಳ್ಳಗಳು ತುಂಬಿಕೊಂಡು, ಭೂಮಿ ಯಲ್ಲಿ ತೇವಾಂಶ ಹೆಚ್ಚಳಗೊಂಡಿದೆ. ಹೀಗಾಗಿ ಚಳಿಗಾಲ ಆರಂಭದಲ್ಲಿಯೇ ಜನರ ಮೈ ನಡುಗಿಸುವ ಚಳಿಗೆ ಮುನ್ನುಡಿ ಬರೆದಿದೆ. ಇನ್ನು ಚಳಿಯ ತೀವ್ರತೆ ಮೂರು ತಿಂಗಳ ಕಾಲವಿದ್ದು, ಡಿಸೆಂಬರ್, ಜನವರಿ, ಫೆಬ್ರವರಿಗೆ ಇನ್ನೆಷ್ಟು ಚಳಿ ಹೆಚ್ಚಾಗುತ್ತದೆಯೋ? ಎಂದು ಜನರು ಕನಲುವಂತಾಗಿದೆ. ಇನ್ನು ಸೂರ್ಯ ಮೂಡುವವರೆಗೂ ಜನರು ಮನೆ ಬಾಗಿಲು, ಕಿಟಕಿ ತೆಗೆಯದೆ ಹೊದಿಕೆ ಆಶ್ರಯದಲ್ಲಿ ಬೆಚ್ಚಗೆ ಮಲುಗುವಂತಾಗಿದ್ದು, ಪಡುವಣ ದಲ್ಲಿ ಸೂರ್ಯ ತನ್ನ ಗೂಡು ಸೇರುತ್ತಿದ್ದಂತೆ ಮತ್ತೆ ಮನೆ ಬಾಗಿಲು, ಕಿಟಕಿ ಮುಚ್ಚಿಕೊಂಡು ಬೆಚ್ಚನೆ ಮನೆಯಲ್ಲಿ ಕೂಡುವಂತಾಗಿದೆ.
*ಚಳಿಗೆ ಪುಳಕ:* ಬೆಳಗ್ಗೆ-ಸಂಜೆ ಹಾಗೂ ‘ರಾತ್ರಿ ವೇಳೆ ತೀವ್ರ ಚಳಿ ಆವರಿಸಿದ್ದರೆ, ಇನ್ನು ಇನ್ನು ಹಗಲು ಹೊತ್ತಿನಲ್ಲಿ ಪ್ರಖರ ಬಿಸಿಲು ಆವರಿಸುತ್ತದೆ. ಹೀಗೆ ಒಂದು ದಿನದಲ್ಲಿ ಬಿಸಿಲು- ಚಳಿಯ ಕಚಗುಳಿಗೆ ಜನರು ಪುಳಕಗೊಳ್ಳುವಂತಾಗಿದೆ. ಮಕ್ಕಳು,ಮಹಿಳೆಯರು, ವೃದ್ಧರು ಕಂಗಾಲಾಗುತ್ತಿದ್ದು, ಇನ್ನು ಅನಾರೋಗ್ಯದಿಂದ ಬಳಲುವವರು ತೀವ್ರ ತೊಂದರೆ ಎದುರಿಸುವಂತಾಗಿದೆ.
ಚಳಿಯ ಹೊಡೆತದಿಂದ ಬಚಾವಾಗಲು ಜನರು ಬೆಚ್ಚನೆ ಬಟ್ಟೆಗಳನ್ನು ಧರಿಸುತ್ತಿದ್ದು, ಬೆಚ್ಚನೆ ಉಡುಪಿಗೆ ಬೇಡಿಕೆ ಹೆಚ್ಚಿದ್ದು, 200 ರೂ.ಗಳಿಂದ 500 ರೂ.ಗಳ ವರೆಗೆ ಮಾರಾಟಗೊಳ್ಳುತ್ತಿವೆ. ಅಲ್ಲದೆ ಚಳಿಯಿಂದ ಮೈ, ಕೈ, ಮುಖಗಳ ಚರ್ಮ ಸುಕ್ಕು ಗಟ್ಟಿ ಕೊರೆಯುತ್ತಿದ್ದು, ಲೋಷನ್, ಕ್ರೀಮ್‌ಗಳ ಲೇಪನಕ್ಕೂ ಜನರು ಮುಂದಾಗಿದ್ದಾರೆ.
ಬೆಳ್ಳಂಬೆಳಗ್ಗೆ ಶಾಲೆಗೆ ಹೋಗುವ ಮಕ್ಕಳು, ಗ್ರಾಮೀಣ ಪ್ರದೇಶದಿಂದ ನಗರಪ್ರದೇಶಕ್ಕೆ ಕೆಲಸಕ್ಕೆ ಬರುವ ಜನರು ಹಾಗೂ ವಾಯು ವಿಹಾರಕ್ಕೆ ತೆರಳುವ ಹಿರಿಯ ನಾಗರಿಕರು ಚಳಿಯ ಕಾಟ ಎದುರಿಸುವಂತಾಗಿದೆ. ಬೆಳಗ್ಗೆ ಶಾಲೆಗೆ ತೆರಳುವ ಮಕ್ಕಳು ಒಲ್ಲದ ಮನಸಿನಿಂದಲೇ ಎದ್ದುಕೊಂಡು, ಚಳಿಯಲ್ಲಿ ನಡಗುತ್ತ, ಸ್ನಾನ ಮಾಡಿ, ತಯಾರಾಗಿ ಶಾಲೆಗೆ ಹೋಗುವ ಅನಿವಾರ್ಯತೆ ಉಂಟಾಗಿದೆ. ಇನ್ನು ಹಿರಿಯ ನಾಗರಿಕರು ತಮ್ಮ ಎಂದಿನ ವಾಯು ವಿಹಾರ ಬಿಟ್ಟು, ಸೂರ್ಯ ಉದಯಿಸುವವರೆಗೂ ಬೆಚ್ಚಗೆ ಮಲಗುವಂತಾಗಿದೆ.

