ಬೆಳಗಾವಿ: ಹೆಣ್ಣು, ಹೊನ್ನು, ಮಣ್ಣಿಗಾಗಿ ಜಗಳಾಡುವದನ್ನು ದಿನನಿತ್ಯ ಪತ್ರಿಕೆಗಳಲ್ಲಿ ಓದುತ್ತೇವೆ. ಆದರೆ ವಿಚಿತ್ರ ಜಗಳವೊಂದು ನಡೆದು ವಿಕೋಪಕ್ಕೆ ಹೋಗಿದೆ.
ತಾಲೂಕಿನ ಬಸ್ತವಾಡ ಗ್ರಾಮದ ಜೈನ ಜಾತ್ರೆ ವೇಳೆ 1500 ರೂ. ಪಾರಿವಾಳ ವಿಷಯಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿ ಹೊಡೆದಾಡಿಕೊಂಡಿರುವ ಘಟನೆ ಗುರುವಾರ ನಡೆದಿದ್ದು, ದೂರು-ಪ್ರತಿದೂರು ದಾಖಲಾಗಿದೆ.
ಬಸ್ತವಾಡ ಗ್ರಾಮದಲ್ಲಿ ಜೈನ ಜಾತ್ರೆಗೆ ಬಂದಿದ್ದ ಆದಿತ್ಯಾ ಕಲ್ಲಪ್ಪ ಪಾಟೀಲ ಹಾಗೂ ದರ್ಶನ ಬಾಹುಬಲಿ ಕುಡಚಿ ಇವರಿಬ್ಬರ ಮಧ್ಯೆ ಪಾರಿವಾಳದ 1500 ರೂ. ಬಗ್ಗೆ ಗಲಾಟೆಯಾಗಿದೆ. ಆದಿತ್ಯಾ ಪಾಟೀಲ ಹಾಗೂ ಈತನೊಂದಿಗರ ಇನ್ನೂ 8 ಜನ ಸೇರಿ ದರ್ಶನ ಕುಡಚಿಯನ್ನು ಹೊಡೆದಿದ್ದು, ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೂವರನ್ನು ಹಿರೇಬಾಗೇವಾಡಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಬಳಿಕ ದರ್ಶನ ಕುಡಚಿ ಈತನ ಸಹಚರರು ಬಸವನ ಕುಡಚಿಗೆ ಗ್ರಾಮಕ್ಕೆ ಆದಿತ್ಯಾ ಪಾಟೀಲನ ಮನೆಗೆ ನುಗ್ಗಿ ಈತನ ತಂದೆ, ಸಹೋದರನೊಂದಿಗೆ ಗಲಾಟೆ ಮಾಡಿದ್ದಾರೆ. ಮನೆಯಲ್ಲಿದ್ದ ಟಿವಿ, ಕಿಟಕಿ ಗಾಜು ಧ್ವಂಸಗೊಳಿಸಿ ಪಾತ್ರೆಗಳನ್ನು ಚಿಲ್ಲಾಪಿಲ್ಲಿ ಮಾಡಿ ತಂದೆಯ ಕೈಗೆ ಹಗ್ಗದಿಂದ ಕಟ್ಟಿ ಮನೆಗೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಆರು ಜನರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.