ಬೆಂಗಳೂರು, ೧: ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಮೈಸೂರಿನ ಕೆ.ಆರ್.ನಗರದ ಮಹಿಳೆ ಮೇಲೆ ನಡೆದ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯ ಈ ಮಹತ್ವದ ತೀರ್ಪನ್ನು ಪ್ರಕಟಿಸಿದ್ದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಜುಲೈ 29 ರಂದು ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದ್ದರು.
ತೀರ್ಪು ಪ್ರಕಟವಾಗುತ್ತಿದ್ದಂತೆಯೇ ನ್ಯಾಯಾಲಯದಲ್ಲಿ ಹಾಜರಿದ್ದ ಪ್ರಜ್ವಲ್ ರೇವಣ್ಣ ಕಣ್ಣೀರಿಟ್ಟರು. ನಂತರ ಕಣ್ಣೀರು ಒರೆಸಿಕೊಳ್ಳುತ್ತಲೇ ಅವರು ನ್ಯಾಯಾಲಯದಿಂದ ಹೊರನಡೆದರು. ಪ್ರಜ್ವಲ್ ರೇವಣ್ಣ ಅವರಿಗೆ ವಿಧಿಸಲಿರುವ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ನಾಳೆ ಪ್ರಕಟಿಸಲಿದೆ. ಕಾನೂನು ತಜ್ಞರ ಪ್ರಕಾರ, ಈ ಪ್ರಕರಣದಲ್ಲಿ ಕನಿಷ್ಠ 10 ವರ್ಷದಿಂದ ಗರಿಷ್ಠ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಯಿದೆ.
ಪ್ರಕರಣ
ಕೆ.ಆರ್ ನಗರದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಮತ್ತು ಅಪಹರಣ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪ್ರಜ್ವಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದರು. ಈ ವಿಷಯ ಬಹಿರಂಗವಾಗಬಹುದೆಂದು ಭಯಗೊಂಡು, ಪ್ರಜ್ವಲ್ ಅವರ ತಂದೆ ಎಚ್.ಡಿ ರೇವಣ್ಣ, ತಾಯಿ ಭವಾನಿ ರೇವಣ್ಣ ಮತ್ತು ಇತರ ಒಂಭತ್ತು ಜನರು ಸೇರಿ ಆ ಮಹಿಳೆಯನ್ನು ಅಪಹರಿಸಿದ್ದರು. ಆಕೆಯನ್ನು ಹುಣಸೂರು ಬಳಿ ಇರುವ ತೋಟದ ಮನೆಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಈ ಅಪಹರಣ ಪ್ರಕರಣದಿಂದಲೇ ಎಚ್.ಡಿ ರೇವಣ್ಣ ಸೇರಿದಂತೆ ಎಂಟು ಜನರು ಜೈಲು ಸೇರಿದ್ದರು. ಭವಾನಿ ರೇವಣ್ಣ ಅವರು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದು, ನಂತರ ನಿರೀಕ್ಷಣಾ ಜಾಮೀನು ಪಡೆದರು.
ವಿಶೇಷ ತನಿಖಾ ದಳ ಸಂತ್ರಸ್ತೆಯನ್ನು ರಕ್ಷಿಸಿ, ಆಕೆಯ ಹೇಳಿಕೆ ದಾಖಲಿಸಿಕೊಂಡು ತನಿಖೆ ನಡೆಸಿತು. ತನಿಖೆ ಮುಗಿದ ನಂತರ ದೋಷಾರೋಪ ಪಟ್ಟಿ ಸಲ್ಲಿಸಲಾಯಿತು. ಪ್ರಜ್ವಲ್ ರೇವಣ್ಣನವರ ಮೊಬೈಲ್ನಲ್ಲಿ ಆ ಮಹಿಳೆಯನ್ನು ಬಲವಂತವಾಗಿ ಬೆತ್ತಲುಗೊಳಿಸಿ ಲೈಂಗಿಕ ಕಿರುಕುಳ ನೀಡಿದ ವಿಡಿಯೋ ಪತ್ತೆಯಾಯಿತು. ಈ ವಿಡಿಯೋ ಪ್ರಮುಖ ಸಾಕ್ಷಿಯಾಯಿತು. ವಿಧಿವಿಜ್ಞಾನ ಪರೀಕ್ಷೆಯಿಂದ ವಿಡಿಯೋದಲ್ಲಿರುವುದು ಪ್ರಜ್ವಲ್ ರೇವಣ್ಣ ಅವರೇ ಎಂದು ದೃಢಪಟ್ಟಿತು. ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಅವರದ್ದೇ ಎಂದು ಹೇಳಲಾದ ಅಶ್ಲೀಲ ವಿಡಿಯೋಗಳಿರುವ ಪೆನ್ಡ್ರೈವ್ಗಳನ್ನು ಹಾಸನ ಕ್ಷೇತ್ರಾದ್ಯಂತ ಹಂಚಲಾಗಿತ್ತು. ಈ ಘಟನೆಯ ನಂತರ ಹೊಳೆನರಸೀಪುರದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮೇ 31, 2024ರಂದು ಪ್ರಜ್ವಲ್ ರೇವಣ್ಣನನ್ನು ಪೊಲೀಸರು ಬಂಧಿಸಿದ್ದರು.
ಅಂದಿನಿಂದ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ ಎಚ್.ಡಿ. ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ಅವರು ಈಗಾಗಲೇ ಜಾಮೀನು ಪಡೆದಿದ್ದಾರೆ.

