ಸಹಸ್ರರಾರು ಭಕ್ತರ ಹರ್ಷೋದ್ಘಾರದಲ್ಲಿ ಮೊಳಗಿದ ಜೈಕಾರ. ಭಕ್ತಿವೈಭವದಿಂದ ನಡೆದ ಹುಕ್ಕೇರಿಮಠದ ಸದಾಶಿವ ಶ್ರೀಗಳ ರಜತ ತುಲಾಭಾರ

A B Dharwadkar
ಸಹಸ್ರರಾರು ಭಕ್ತರ ಹರ್ಷೋದ್ಘಾರದಲ್ಲಿ ಮೊಳಗಿದ ಜೈಕಾರ. ಭಕ್ತಿವೈಭವದಿಂದ ನಡೆದ ಹುಕ್ಕೇರಿಮಠದ ಸದಾಶಿವ ಶ್ರೀಗಳ ರಜತ ತುಲಾಭಾರ

ಹಾವೇರಿ: ನಗರದ ಪ್ರಸಿದ್ಧ ಹುಕ್ಕೇರಿಮಠದ ಮಠಾಧ್ಯಕ್ಷರಾದ ಶ್ರೀ ಸದಾಶಿವ ಸ್ವಾಮೀಜಿ ಅವರ 15ನೇ ವರ್ಧಂತಿ ನಿಮಿತ್ತ ಹಮ್ಮಿಕೊಂಡಿದ್ದ ರಜತಾ ತುಲಾಭಾರ ಸೇವೆಯು ಸಹಸ್ರ ಭಕ್ತಧಿಗಳ ಹರ್ಷೋದ್ಘಾರದೊಂದಿಗೆ ಭಕ್ತಿಭಾವದಿಂದ ಸೋಮವಾರ ರಾತ್ರಿ ವೈಭವದಿಂದ ನೆರವೇರಿತು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಹುಕ್ಕೇರಿಮಠದ ಜಾತ್ರಾ ಮಹೋತ್ಸವ, ಶ್ರೀಮಠದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುವರ್ಣ ಮಹೋತ್ಸವ, ಪ್ರಸಾದ ನಿಲಯದ ಅಮೃತ ಮಹೋತ್ಸವ, ಪ್ರಸಾದ ನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ಸುವರ್ಣ ಮಹೋತ್ಸವ, ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವ ಸುಸಂದರ್ಭದಲ್ಲಿ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸದಾಶಿವ ಸ್ವಾಮೀಜಿ ಅವರಿಗೆ ತೂಕದ ರಜತ ತುಲಭಾರ ನಡೆಸಲಾಯಿತು. ಇದೇ ವೇಳೆ ಸದಾಶಿವ ಶ್ರೀಗಳನ್ನು ರಜತಾ ಸಿಂಹಾಸನರೋಹಣದ ಮೇಲೆ ಕುಳ್ಳರಿಸಿ ಗೌರವಿಲಾಯಿತು.
ನಾಡಿನ ಮೂಲೆಮೂಲೆಗಳಿಂದ ಆಗಮಿಸಿದ್ದ ಜನಪ್ರತಿನಿಧಿಗಳು, ಶ್ರೀಮಠದ ಭಕ್ತಾಧಿಗಳು, ಮಠದ ಶಿಷ್ಯರು, ಹಳೆಯ ವಿದ್ಯಾರ್ಥಿಗಳು ತುಲಾಭಾರ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಹುಕ್ಕೇರಿಮಠದ ಜಾತ್ರಾ ಮಹೋತ್ಸವ ನಿಮಿತ್ತ ಡಿ. 9ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊ೦ಡಿದ್ದು, ಡಿ. 30ರಂದು ನಡೆಯಲಿರುವ ಶ್ರೀ ಮಠದ ಪೂಜ್ಯದ್ವಯರ ಪುಣ್ಯಸ್ಮರಣೋತ್ಸವದೊಂದಿಗೆ ಎಲ್ಲಾ ಕಾರ್ಯಕ್ರಮಗಳು ಮಂಗಲಗೊಳ್ಳಲಿವೆ.
ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ, ಶಿರಸಿಯ ಅಟವಿ ಶಿವಲಿಂಗ ಸ್ವಾಮೀಜಿ, ಮಾದನಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಅಕ್ಕಿಆಲೂರು ಶಿವಬಸವ ಸ್ವಾಮೀಜಿ, ಮಣಕವಾಡದ ಮೃತ್ಯುಂಜಯ ಸ್ವಾಮೀಜಿ, ಶೇಗುಣಸಿ ಡಾ. ಮಹಾಂತಪ್ರಭು ಸ್ವಾಮೀಜಿ, ಸಚಿವ ಶಿವಾನಂದ ಪಾಟೀಲ, ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಮಹೇಶ ತೆಂಗಿನಕಾಯಿ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಎಸ್.ಆರ್ ಪಾಟೀಲ, ಡಿಸಿ ಡಾ. ವಿಜಯಮಹಾಂತೇಶ ದಾನಮ್ಮನವರ, ಯಶೋಧಾ ವಂಟಗೋಡಿ, ರುಚಿ ಬಿಂದಲ್, ಭರತ ಬೊಮ್ಮಾಯಿ, ಸಂಜೀವಕುಮಾರ ನೀರಲಗಿ ಸೇರಿದಂತೆ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಜಾತ್ರಾ ಮಹೋತ್ಸವ ಸಮಿತಿ, ಬೆಳ್ಳಿ ತುಲಾಭಾರ ಸಮಿತಿ, ಪ್ರಸಾದ ನಿಲಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಾಜಿ ಶಾಸಕ ಶಿವರಾಜ ಸಜ್ಜನರ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು.

*ಕೋಟ್..*
ಶಿವಯೋಗ ಮಂದಿರಕ್ಕೆ ಅತ್ಯಂತ ಕಿರಿಯ ವಯಸ್ಸಿನಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅವರು ದೊಡ್ಡ ಜವಾಬ್ದಾರಿ ಹೊತ್ತಿರುವ ಧೀರ ಸನ್ಯಾಸಿಯಾಗಿದ್ದಾರೆ. ಅವರು ಯಾರ ಮನಸ್ಸಿಗೂ ನೋವು ಆಗದಂತೆ ನುಡಿಯುವವರು ಸದಾಶಿವ ಶ್ರೀಗಳು. ತಾಯಿಗೆ ಸಮ ಯಾರೂ ಇಲ್ಲ, ನಮ್ಮೂರಲ್ಲಿ ವೃದ್ಧಾಶ್ರಮಗಳು ಬರದಂತೆ ನೋಡಿಕೊಳ್ಳಬೇಕು.
-ಸಿದ್ದಾರೂಢ ಸ್ವಾಮೀಜಿ, ವಿಜಯಪುರದ ಷಣ್ಮುಖಾರೂಢ ಮಠ.

*ಕೋಟ್…*
ಭಾರತ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ಭಾರತ ರತ್ನಗಳು. ನಾವು ಶಿಕ್ಷಣ ಪಡೆಯಲು ಆರ್ಥಿಕ ಸಂಕಷ್ಟದಲ್ಲಿದ್ದಾಗ ಎದುರಾದಾಗ ಸದಾಶಿವ ಶ್ರೀಗಳು ನೆರವು ನೀಡಿದ ಮಾತೃ ಹೃದಯಿಗಳು. ತುಲಾಭಾರದಿಂದ ಬಂದ ಬೆಳ್ಳಿ ಹಣದಲ್ಲಿ ಬಡ ಮಕ್ಕಳಿಗೆ ನೆರವಾಗಲು ಉಚಿತ ವಸತಿ ನಿಲಯ ಕಟ್ಟಲು ನಿರ್ಧರಿಸಿದ್ದಾರೆ.
-ಮೃತ್ಯುಂಜಯ ಸ್ವಾಮೀಜಿ, ಮಣಕಮಣಕವಾಡ.

*ಕೋಟ್*..
ಈ ನಾಡಿನಲ್ಲಿ ಸರ್ಕಾರ ಮಾಡದಿರುವ ಕೆಲಸವನ್ನು ವೀರಶೈವ ಲಿಂಗಾಯತ ಮಠಗಳು ಮಾಡಿವೆ. ಪರಮಪೂಜ್ಯರ ಇಚ್ಛಾಶಕ್ತಿಯನ್ನು ಸರ್ಕಾರದಿಂದ ಈಡೇರಿಸುವ ಪ್ರಯತ್ನ ಮಾಡುತ್ತೇವೆ. ಉಚಿತ ವಿದ್ಯಾರ್ಥಿ ಪ್ರಸಾದ ನಿಲಯಕ್ಕೆ ವಯಕ್ತಿಕವಾಗಿ 11 ಲಕ್ಷ ರೂ., ನೀಡುತ್ತೇನೆ.
-ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ.

*ಕೋಟ್..*
ಆಧ್ಯಾತ್ಮಿಕತೆಯೇ ಭಾರತಕ್ಕೆ ದೊಡ್ಡ ಶಕ್ತಿ. ನಾಡಿನ ಮಠಗಳ ತ್ರಿವಿಧ ದಾಸೋಹದಿಂದಲೇ ಇಂದು ರಾಜ್ಯ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಹುಕ್ಕೇರಿಮಠ ಎರಡನೇ ಅನುಭವ ಮಂಟಪವಾಗುತ್ತಿದೆ. ಎಷ್ಟೇ ಟೀಕೆಗಳು ಬಂದರೂ ಸಹ ಯಡಿಯೂರಪ್ಪನವರು ಎಲ್ಲಾ ಸಮಾಜದ ಮಠಗಳಿಗೆ ಅನುದಾನ ನೀಡಿದ್ದರು. ನಾನು ಸಹ ಉಚಿತ ವಿದ್ಯಾರ್ಥಿ ಪ್ರಸಾದ ನಿಲಯಕ್ಕೆ ವಯಕ್ತಿಕವಾಗಿ 11 ಲಕ್ಷ ರೂ., ನೀಡುತ್ತೇನೆ.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.

*ಕೋಟ್..*
ಸದಾಶಿವ ಶ್ರೀಗಳು ಎಲ್ಲಾ ಸಮಾಜದ ವ್ಯಕ್ತಿಗಳನ್ನು ಸಮಾನವಾಗಿ ಪ್ರೀತಿ, ವಿಶ್ವಾಸದಿಂದ ಕಾಣುತ್ತಾರೆ. ಈಗ ಹುಕ್ಕೇರಿಮಠದ ಕೀರ್ತಿ ಈಗ ಇಡೀ ರಾಜ್ಯದಲ್ಲಿ ಪ್ರಚಾರ ಆಗಿದೆ.
-ಬಸವರಾಜ ಶಿವಣ್ಣನವರ, ಶಾಸಕರು. ಬ್ಯಾಡಗಿ

*ಕೋಟ್..*
ಹುಕ್ಕೇರಿಮಠದ ಆಧ್ಯಾತ್ಮಿಕ ಕಾರ್ಯಕ್ರಮದಿಂದ ಎಲ್ಲರಿಗೂ ಮನಶಾಂತಿ ಸಿಕ್ಕಿದೆ. ಈ ಜಿಲ್ಲೆಯಲ್ಲಿ ಹುಟ್ಟಿದ ಎಲ್ಲರೂ ಪುಣ್ಯವಂತರು. ಇದೊಂದು ಅಮೃತಗಳಿಗೆ. ಜಾಗತೀಕರಣದ ಸಂದರ್ಭದಲ್ಲಿ ಅಂತಃಕರಣದ ಜಾಗೃತಿ ಮೂಡಿಸಿ ಹುಕ್ಕೇರಿಮಠದ ಶ್ರೀಗಳು ಭಕ್ತಿಯ ಹೊಳೆ ಹರಿಸಿದ್ದಾರೆ. ಉಚಿತ ವಿದ್ಯಾರ್ಥಿ ಪ್ರಸಾದ ನಿಲಯದ ಕಟ್ಟಡ ನಿರ್ಮಾಣಕ್ಕೆ ಸಂಸದರ ನಿಧಿಯಿಂದ 20ಲಕ್ಷ ರೂ., ಅನುದಾನ ನೀಡುತ್ತೇನೆ.
-ಬಸವರಾಜ ಬೊಮ್ಮಾಯಿ, ಸಂಸದರು.

ಸಮಾಜದ ಭಾರ ಹೊತ್ತಿರುವವರಿಗೆ ಮಾತ್ರ ಬೆಳ್ಳಿಯ ತುಲಾಭಾರ ಮಾಡಲಾಗುತ್ತಿದೆ. 75 ಹಳ್ಳಿಗಳ ಭಾರ ಶ್ರೀಗಳ ಮೇಲೆ ಇದೆ. ಹಾವೇರಿಯಲ್ಲಿ ವಜ್ರದಂತೆ ಗುರುಗಳು, ಬಂಗಾರದಂಥ ಭಕ್ತರು ಇದ್ದಾರೆ. ವಜ್ರದಂತೆ ಹೊಳೆಯುವ ಶ್ರೀಗಳನ್ನು ಪಡೆದಿರುವ ಭಕ್ತರೇ ಶ್ರೇಷ್ಠರು.
– ಅಭಿನವ ಶಿವಲಿಂಗ ಸ್ವಾಮೀಜಿ, ಮಾದನಹಿಪ್ಪರಗಿ.

ಸಮುದಾಯ, ಯುವ ಜನಾಂಗ ದಾರಿ ತಪ್ಪಿ ಹೋಗುತ್ತಿರುವ ಸಂದರ್ಭದಲ್ಲಿ ಸದಾಶಿವ ಸ್ವಾಮೀಜಿ ದುಶ್ಚಟಗಳ ಭಿಕ್ಷೆ ಸದ್ಗುಣ ದೀಕ್ಷೆ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ. ವಿದ್ಯಾರ್ಥಿ ಪ್ರಸಾದ ನಿಲಯಕ್ಕೆ ನನ್ನ ಅನುದಾನದಲ್ಲಿ 25 ಲಕ್ಷ ರೂ. ನೀಡುತ್ತೇನೆ.
– ರುದ್ರಪ್ಪ ಲಮಾಣಿ, ಶಾಸಕ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.