ಹಾವೇರಿ : ತಮ್ಮ ತಂದೆಯ ಹೆಸರಿಗೆ ಇದ್ದ ನ್ಯಾಯಬೆಲೆ ಅಂಗಡಿಯನ್ನು ತಂದೆಯ ಮರಣಾನಂತರ ಅನುಕಂಪದ ಆಧಾರದ ಮೇಲೆ ಹೆಸರು ಬದಲಾವಣೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ರಾಣೆಬೆನ್ನೂರ ತಹಶೀಲ್ದಾರ ಕಚೇರಿಯ ಆಹಾರ ನಿರೀಕ್ಷಕ ಇದೀಗ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾರೆ.
ರಾಣೆಬೆನ್ನೂರ ತಹಶೀಲ್ದಾರ ಕಚೇರಿಯ ಆಹಾರ ನಿರೀಕ್ಷಕ ಶಂಭು ತಂದೆ ಮಹದೇವಪ್ಪ ಸೋಮನಹಳ್ಳಿ ಬಂಧಿತರು. ರಾಣೆಬೆನ್ನೂರ ಶಹರದ ಗಣೇಶನಗರ ರಾಘವೇಂದ್ರ ತಂದೆ ಶಿವರಾಂ ಪಾಸ್ತೆ ತಮ್ಮ ತಂದೆ ಹೆಸರಿಗಿರುವ ನ್ಯಾಯಬೆಲೆ ಅಂಗಡಿಯನ್ನು ಅನುಕಂಪದ ಆಧಾರದ ಮೇಲೆ ತಮ್ಮ ಹೆಸರಿಗೆ ಮಂಜೂರು ಮಾಡಲು ಅರ್ಜಿ ಸಲ್ಲಿಸಿದ್ದರು. ಆದರೆ ಈ ಹೆಸರು ಬದಲಾವಣೆಗೆ ಆಹಾರ ನಿರೀಕ್ಷಕ ಶಂಭು ರೂ.೨೦,೦೦೦ಕ್ಕೆ ಬೇಡಿಕೆ ಇಟ್ಟು ನಂತರ ಬುಧವಾರ ದೂರುದಾರ ರಾಘವೇಂದ್ರ ಕಡೆಯಿಂದ ರೂ.೨೦ಸಾವಿರ ಲಂಚದ ಹಣವನ್ನು ಪಡೆದುಕೊಳ್ಳುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ತನಿಖೆಯನ್ನು ದಾವಣೆಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿದ್ದು, ಡಿವೈಎಸ್ಪಿ ಮಧುಸೂಧನ, ನೇvÈÀತ್ವದಲ್ಲಿ ತನಿಖಾಧಿಕಾರಿಗಳಾದ ವಿಶ್ವನಾಥ ಕಬ್ಬೂರಿ, ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆರೋಪಿತರನ್ನು ರಾಣೆಬೆನ್ನೂರ ತಹಶೀಲ್ದಾರ ಕಚೇರಿಯಲ್ಲಿ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆದಿದೆ.



