ಬೆಳಗಾವಿ : ಸಚಿವೆ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ಪ್ರಕರಣದಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ನ್ಯಾಯಾಲಯ ಇಂದು ಮಹತ್ವದ ಆದೇಶ ಪ್ರಕಟಿಸಿದ್ದು ಅವರನ್ನು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಬೆಳಗಾವಿಯ ಐದನೇ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸ್ಪರ್ಶ ಡಿಸೋಜ ಅವರು ಆದೇಶಿಸಿದ್ದಾರೆ.
ರವಿ ಅವರನ್ನು ಟ್ರಾಜೆಂಟ್ ವಾರೆಂಟ್ ಆದೇಶದಂತೆ ಪೊಲೀಸರು ಬೆಂಗಳೂರಿಗೆ ಕರೆದೊಯ್ಯಲಿದ್ದಾರೆ. ಹಿರೇಬಾಗೇವಾಡಿ ಪೊಲೀಸರು ಇಂದು ಬೆಳಗ್ಗೆ ಬೆಳಗಾವಿ ನ್ಯಾಯಾಲಯಕ್ಕೆ ರವಿ ಅವರನ್ನು ಹಾಜರುಪಡಿಸಿದ್ದರು.
ಅವರ ವಕೀಲರು ಜಾಮೀನು ನೀಡುವಂತೆ ಮನವಿ ಮಾಡಿದ್ದರು. ವಾದ- ಪ್ರತಿವಾದ ಆಲಿಸಿರುವ ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು. ಆದರೆ ತನಿಖಾಧಿಕಾರಿಗಳು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕರೆದೊಯ್ಯಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ಬೆಳಗಾವಿ ನ್ಯಾಯಾಲಯ ಬೆಂಗಳೂರಿಗೆ ಕರೆದೊಯ್ಯಲು ಎಷ್ಟು ಸಮಯ ಬೇಕು ಎಂದು ಕೇಳಿದೆ. ಇದಕ್ಕೆ ಪೊಲೀಸರು ವಿಮಾನದ ಮೂಲಕ ಹೋಗುವುದಾದರೆ ಎರಡು ಗಂಟೆ, ರಸ್ತೆ ಮೂಲಕ ಹೋಗುವುದಾದರೆ 12 ಗಂಟೆ ಬೇಕು ಎಂದು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.