ನಿವೃತ್ತ ಸುಪ್ರೀಮ ಕೋರ್ಟ ನ್ಯಾಯಮೂರ್ತಿ ಸುದರ್ಶನ್‌ ರೆಡ್ಡಿ ಇಂಡಿಯಾ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ

A B Dharwadkar
ನಿವೃತ್ತ ಸುಪ್ರೀಮ ಕೋರ್ಟ ನ್ಯಾಯಮೂರ್ತಿ ಸುದರ್ಶನ್‌ ರೆಡ್ಡಿ ಇಂಡಿಯಾ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ

ಹೊಸದಿಲ್ಲಿ, ಅಗಸ್ಟ ೧೯: ಸುಪ್ರೀಮ ಕೋರ್ಟ ನಿವೃತ್ತ ನ್ಯಾಯಮೂರ್ತಿ ಸುದರ್ಶನ್‌ ರೆಡ್ಡಿ ಅವರು ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಉಪರಾಷ್ಟ್ರಪತಿ ಸ್ಥಾನಕ್ಕೆ ಕಣಕ್ಕಿಳಿಯಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಸುದರ್ಶನ್‌ ರೆಡ್ಡಿ ಹೆಸರನ್ನು ಅಂತಿಮಗೊಳಿಸಲಾಗಿದ್ದು ಉಪರಾಷ್ಟ್ರಪತಿ ಚುನಾವಣೆಗೆ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು ಈಗಾಗಲೇ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಗೋವಾದ ಮೊದಲ ಲೋಕಾಯುಕ್ತರಾಗಿದ್ದ ಸುದರ್ಶನ್‌ ರೆಡ್ಡಿ ಅವರು 16 ವರ್ಷಗಳಿಗೂ ಹೆಚ್ಚು ಕಾಲ ಹೈಕೋರ್ಟ, ಸುಪ್ರೀಮ ಕೋರ್ಟನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಉಪರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ.

ಸುದರ್ಶನ್‌ ರೆಡ್ಡಿ ಅವರು 1946ರ ಜುಲೈ 8ರಂದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಕುಲಾ ಮೈಲಾರಂ ಗ್ರಾಮದಲ್ಲಿ ಜನಿಸಿದರು. 1971ರ ಡಿಸೆಂಬರ್ 27ರಂದು ಆಂಧ್ರಪ್ರದೇಶದ ಬಾರ್ ಕೌನ್ಸಿಲನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದರು.

ಸುದರ್ಶನ್‌ ರೆಡ್ಡಿ ಅವರು ಆಂಧ್ರಪ್ರದೇಶದ ಹೈಕೋರ್ಟನಲ್ಲಿ ರಿಟ್ ಮತ್ತು ಸಿವಿಲ್ ವಿಷಯಗಳಲ್ಲಿ ಅಭ್ಯಾಸ ಮಾಡಿದ್ದಾರೆ. 1988ರಿಂದ 90ರವರೆಗೆ ಹೈಕೋರ್ಟನಲ್ಲಿ ಸರ್ಕಾರಿ ವಕೀಲರಾಗಿಯೂ ಕೆಲಸ ಮಾಡಿದ್ದಾರೆ. ನಂತರ, ಆರು ತಿಂಗಳ ಕಾಲ ಕೇಂದ್ರ ಸರ್ಕಾರದ ಪರ ವಕೀಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಜತೆಗೆ, ಆಂಧ್ರಪ್ರದೇಶದ ಉಸ್ಮಾನಿಯಾ ವಿಶ್ವವಿದ್ಯಾಲಯ ಕಾನೂನು ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸುದರ್ಶನ್‌ ರೆಡ್ಡಿ ಅವರು 1995ರ ಮೇ 2ರಂದು ಆಂಧ್ರಪ್ರದೇಶ ಹೈಕೋರ್ಟ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. ನಂತರ 2005ರ ಡಿಸೆಂಬರ್ 5ರಂದು ರೆಡ್ಡಿ ಅವರನ್ನು ಗುವಾಹಟಿ ಹೈಕೋರ್ಟನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಯಿತು. ಬಳಿಕ 2007ರ ಜನವರಿ 12ರಂದು ರೆಡ್ಡಿ ಅವರು ಸುಪ್ರೀಮ ಕೋರ್ಟ ನ್ಯಾಯಾಧೀಶರಾಗಿ ನೇಮಕಗೊಂಡು 2011ರ ಜುಲೈ 8ರಂದು ನಿವೃತ್ತರಾದರು.

ಜಗದೀಪ ಧನಕರ ಅವರು ಕಳೆದ ತಿಂಗಳು ರಾಜೀನಾಮೆ ನೀಡಿದ್ದರಿಂದ ಉಪರಾಷ್ಟ್ರಪತಿ ಹುದ್ದೆ ತೆರವಾಗಿತ್ತು. ಉಪರಾಷ್ಟ್ರಪತಿ ಚುನಾವಣೆ ಸೆಪ್ಟೆಂಬರ 9ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಅಗಸ್ಟ 22 ಕೊನೆಯ ದಿನಾಂಕ ಆಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.