ಬೆಳಗಾವಿ, ೧೩: ಭಾರತ ಕಮ್ಯುನಿಸ್ಟ ಪಕ್ಷ (ಸಿಪಿಐ)ದ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಗೋವಾ ವಿಮೋಚನಾ ಹೋರಾಟಗಾರ, ಗಾಂಧಿವಾದಿ, ಬರಹಗಾರ ಮತ್ತು ಕಾರ್ಮಿಕ ಸಂಘದ ನಾಯಕರಾಗಿದ್ದ ಕೃಷ್ಣಾ ಮೆಣಸೆ ಅವರು ಸೋಮವಾರ ಬೆಳಗಾವಿಯಲ್ಲಿ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಪುತ್ರರಾದ ಆನಂದ ಮೆಣಸೆ, ಭೂವಿಜ್ಞಾನದ ನಿವೃತ್ತ ಪ್ರಾಧ್ಯಾಪಕ ಮತ್ತು ವಕೀಲ ಸಂಜಯ ಮೆನ್ಸೆ, ಪುತ್ರಿಯರಾದ ಲತಾ ಪಾವ್ಶೆ ಮತ್ತು ನೀತಾ ಪಾಟೀಲ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಅವರು, ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುವ ಪಿಂಚಣಿ ಅಥವಾ ಇತರ ಸೌಲಭ್ಯಗಳನ್ನು ಸ್ವೀಕರಿಸಲು ನಿರಾಕರಿಸಿದ್ದರು. ಏಕೀಕರಣದ ನಂತರ ಕರ್ನಾಟಕದ ನಾಯಕರಾಗಿ ರಾಜ್ಯದಾದ್ಯಂತ ಸಿಪಿಐ ಚಳವಳಿಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಜ್ಯ ಸಮಿತಿ ಹಾಗೂ ರಾಷ್ಟ್ರೀಯ ಮಂಡಳಿ ಸದಸ್ಯರಾಗಿದ್ದರು. ಮರಾಠಿ ಸಾಹಿತಿಯಾಗಿ ಹೆಸರು ಗಳಿಸಿದ್ದರು. ಪತ್ರಕರ್ತರೂ ಆಗಿದ್ದ ಅವರು, ಗಡಿ ಸಂಬಂಧಿ ಹೋರಾಟದಲ್ಲೂ ಮುಂಚೂಣಿಯ ನಾಯಕರಾಗಿದ್ದರು.
1975ರಲ್ಲಿ ಮುಂಬೈನಲ್ಲಿ ಅನ್ನಪೂರ್ಣ ಮಹಿಳಾ ಮಂಡಲ ಸ್ಥಾಪಿಸಿ, ಮಹಿಳಾ ಕಾರ್ಮಿಕರ ಹೋರಾಟಕ್ಕೆ ಧ್ವನಿ ನೀಡಿದ್ದರು. 1984ಲ್ಲಿ ಬೆಳಗಾವಿ ಸಿಟಿ ಮಜ್ದೂರ್ ಕೋ–ಆಪ್ ಕ್ರೆಡಿಟ್ ಸೊಸೈಟಿ ಸ್ಥಾಪಿಸುವಲ್ಲಿ ಮುಂಚೂಣಿ ವಹಿಸಿದ್ದರು.
1988ರಲ್ಲಿ ‘ಪೂರ್ವಗಾಮಿ’ ಎಂಬ ಹೋರಾಟದ ಸಂಸ್ಥೆ ಸ್ಥಾಪಿಸಿದರು. ಅವರು ಆರಂಭಿಸಿದ ‘ಸಾಮ್ಯವಾದಿ’ ಎಂಬ ಮರಾಠಿ ವಾರಪತ್ರಿಕೆ ಇನ್ನೂ ಪ್ರಕಟವಾಗುತ್ತಿದೆ.
ಹಲವಾರು ವರ್ಷಗಳ ಕಾಲ ಬೆಳಗಾವಿಯಲ್ಲಿ ಭಾರತೀಯ ಅಲ್ಯುಮಿನಿಯಂ ಕಂಪನಿಯ ಲೇಬರ್ ಯೂನಿಯನ್ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸಕ್ರಿಯವಾಗಿದ್ದ ಮೂಢನಂಬಿಕೆ ವಿರೋಧಿ ಲೀಗ್ ನ ಮುಂಚೂಣಿ ನಾಯಕರಲ್ಲಿ ಅವರು ಕೂಡ ಒಬ್ಬರು.
ಏಕೀಕರಣದ ನಂತರ ಕರ್ನಾಟಕದ ನಾಯಕರಾಗಿ ರಾಜ್ಯದಾದ್ಯಂತ ಸಿಪಿಐ ಚಳವಳಿಯನ್ನು ಕಟ್ಟುವಲ್ಲಿ ಮೆಣಸೆ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಕರ್ನಾಟಕದ ಕಾರ್ಮಿಕ ಮತ್ತು ಕಮ್ಯುನಿಸ್ಟ ಚಳವಳಿಯ ಪ್ರಮುಖ ನಾಯಕ ಮೆಣಸೆ ಎಂದು ಬರಹಗಾರ ಮತ್ತು ದೀರ್ಘಕಾಲದ ಸಹವರ್ತಿ ಕಮ್ಯುನಿಸ್ಟ ನಾಯಕ ಸಿದ್ದನಗೌಡ ಪಾಟೀಲ ಸ್ಮರಿಸಿದ್ದಾರೆ.
ಪೋರ್ಚುಗೀಸ್ ಆಡಳಿತದ ವಿರುದ್ಧ ಗೋವಾ ವಿಮೋಚನಾ ಚಳವಳಿಯಲ್ಲಿ ರಾಮ ಮನೋಹರ ಲೋಹಿಯಾ ನೇತೃತ್ವದ ಸಮಾಜವಾದಿ ಪಕ್ಷದೊಂದಿಗೆ ಸಿಪಿಐ ಕೈಜೋಡಿಸಿತು, ಆದರೆ ಈ ಪ್ರದೇಶದ ಕಾಂಗ್ರೆಸ್ ನಾಯಕರು ಸೇರಲಿಲ್ಲ ಎಂದು ಅವರು ಹೇಳಿದರು. ಬೆಳಗಾವಿ ಮತ್ತು ಕಾರವಾರದಿಂದ ವಿವಿಧ ಮಾರ್ಗಗಳಿಂದ ಗೋವಾ ಪ್ರವೇಶಿಸುವ ಕಾರ್ಯಕರ್ತರಿಗೆ ಮೆಣಸೆ ಸಹಾಯ ಮಾಡಿದ್ದರು ಎಂದು ಅವರು ತಿಳಿಸಿದರು.
ಕೃಷ್ಣಾ ಮೆಣಸೆ ಅವರು ವಿಶ್ವಗುರು ಬಸವೇಶ್ವರರ ವಚನಗಳನ್ನು ಮರಾಠಿಗೆ ಅನುವಾದಿಸಿದ್ದಾರೆ. ಅವರು ಮಾರ್ಕ್ಸವಾದ ಮತ್ತು ಕಾರ್ಮಿಕ ಚಳುವಳಿ, ಕೋಮು ಸೌಹಾರ್ದತೆ ಮತ್ತು ಕಾರ್ಮಿಕ ಹಕ್ಕುಗಳ ಕುರಿತು ಪುಸ್ತಕಗಳ ಸರಣಿಯನ್ನು ಬರೆದಿದ್ದಾರೆ. ಹಲವು ಟ್ರೇಡ್ ಯೂನಿಯನ್ ಸಂಸ್ಥೆಗಳು ಕೃಷ್ಣಾ ಮೆಣಸೆ ಅವರ ನಿಧನಕ್ಕೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಿವೆ.