ಗೋಕಾಕ, 11: ಹಿರಿಯ ಪತ್ರಕರ್ತ ಶಾಹೀದ ಬಾಬಾಸಾಹೇಬ ಧಾರವಾಡಕರ ಅವರು ಶುಕ್ರವಾರ ಬೆಳಿಗ್ಗೆ ಗೋಕಾಕದ ಬಣಗಾರ ಓಣಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದ ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ನಾಲ್ವರು ಸಹೋದರರು, ಮೂವರು ಸಹೋದರಿಯರು ಮತ್ತು ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ.
ತಂದೆ ದಿವಂಗತ ಬಿ.ಎನ್. ಧಾರವಾಡಕರ ಅವರು ನಡೆದ ಸಮತಾವಾದಿ ಸಿದ್ಧಾಂತದ ದಾರಿಯಲ್ಲಿಯೇ ಸಾಗಿದ ಅವರು, 70ರ ದಶಕದ ಆರಂಭದಲ್ಲಿ ಕಾರವಾರ ಮತ್ತು ಬಿಜಾಪುರದಿಂದ ಪ್ರಕಾಶಿತಗೊಳ್ಳುತ್ತಿದ್ದ ಯುಗದೀಪ ದಿನಪತ್ರಿಕೆಯ ಸಂಪಾದಕರಾಗಿ ಕೆಲ ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ನಂತರ 1975ರಿಂದ ಸುಮಾರು ಒಂದು ದಶಕ ಕಾಲ ಸಮದರ್ಶಿ ದಿನಪತ್ರಿಕೆಯ ಸಂಪಾದಕರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ. ಕಂಪೋಜಿಟರ್, ಪ್ರುಫ್ ರೀಡರ್, ವರದಿಗಾರ ಮತ್ತು ಸಂಪಾದಕರಾಗಿ ಐದು ದಶಕಗಳಿಗೂ ಹೆಚ್ಚಿನ ಕಾಲ ಅವರು ಪತ್ರಿಕಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಕುಂಟುತ್ತ ನಡೆದಿದ್ದ ಗೋಕಾಕದ ತಂಜೀಮ ಎಜುಕೇಶನ್ ಸೊಸಾಯಟಿಯ ಪ್ರಧಾನ ಕಾರ್ಯದರ್ಶಿಯಾಗಿ ಶಾಹೀದ ಧಾರವಾಡಕರ ಅವರು ಅದನ್ನು ಉತ್ತುಂಗ ಸ್ಥಿತಿಗೆ ತಲುಪಿಸಿದ್ದರು. ಅಲ್ಲದೇ ಗೋಕಾಕದಲ್ಲಿ ಪ್ರೆಸ್ ಕ್ಲಬ್ ಆರಂಭಕ್ಕೆ ಶಾಹೀದ ಅವರೇ ಮುಖ್ಯ ಕಾರಣಕರ್ತರಾಗಿದ್ದರು.
ದಿವಂಗತರ ಅಂತ್ಯಕ್ರಿಯೆ ಶುಕ್ರವಾರ ಸಂಜೆ 5.30 ಕ್ಕೆ ಗೋಕಾಕದಲ್ಲಿ ನೆರವೇರಿತು. ಸಾವಿರಾರು ಹಿಂದೂ-ಮುಸ್ಲಿಮ ಬಾಂಧವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಸಂತಾಪ :
ಪತ್ರಕರ್ತ ಶಾಹೀದ ಧಾರವಾಡಕರ ಅವರ ನಿಧನಕ್ಕೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಭೀಮಶಿ ಜಾರಕಿಹೊಳಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.