ಹಾವೇರಿ : ನಗರದ ನಾಗೇಂದ್ರಮಟ್ಟಿಯಲ್ಲಿ ಮನೆಗಳ ಸರಣಿ ಕಳ್ಳತನ ನಡೆದಿದ್ದು, ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸಿದ ಘಟನೆ ವರದಿಯಾಗಿದೆ.
ಸುಮಾರು ೭ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿ ನಗದು ಚಿನ್ನಾಭರಣ ಸೇರಿದಂತೆ ವಿವಿಧ ವಸ್ತುಗಳನ್ನು ಹೊತ್ತೊಯ್ದಿದ್ದಾರೆ.
ಚಳಿಗೆ ಚಹಾ ಕಾಯಿಸಿದರು : ಇನ್ನು ಕಳ್ಳತನಕ್ಕೆ ಇಳಿದಿದ್ದ ಕಳ್ಳರು ಚಳಿಗೆ ತತ್ತರಿಸಿ, ಕದ್ದ ಮನೆಯೊಂದರಲ್ಲಿ ಚಹ ಮಾಡಿಕೊಂಡು ಕುಡಿದು ಹೋಗಿದ್ದು ಈ ಕೃತ್ಯಕ್ಕೆ ನಾಗೇಂದ್ರಮಟ್ಟಿಯ ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಸರಣಿ ಕಳ್ಳತನದ ಘಟನೆ ಬೆನ್ನಲ್ಲೇ ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಘಟನಾ ಸ್ಥಳಕ್ಕೆ ಹಾವೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



