ಬೆಳಗಾವಿ : ನಗರದಲ್ಲಿ ಘೋರ ದುರಂತ ನಡೆದಿದ್ದು, ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿ ಮೂವರ ಮೃತಪಟ್ಟಿದ್ದರೆ, ಓರ್ವಳ ಸ್ಥಿತಿ ಗಂಭೀರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮೃತರನ್ನು 44 ವರುಷದ ಮಂಗಳಾ ಕುರಡೇಕರ, ಮಗಳು ಸುವರ್ಣ ಕುರಡೇಕರ ಮತ್ತು ಮಗ ಸಂತೋಷ ಕುರಡೇಕರ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ್ದ ಕುಟುಂಬದ ಇನ್ನೋರ್ವ ಸದಸ್ಯೆಯ ಆರೋಗ್ಯ ಸ್ಥಿತಿ ಚಿಂತಾಜನಂಕವಾಗಿದೆ, ಅವರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಶಹಾಪುರಿನ ಜೋಷಿಮಾಳದಲ್ಲಿ ವಾಸವಾಗಿದ್ದ ಕುಟುಂಬವು ಮಾಡಿದ್ದ ಸಾಲ ಹಿಂದಿರುಗಿಸಲು ಸಾಧ್ಯವಾಗದ್ದರಿಂದ ಬುಧವಾರ ಮುಂಜಾನೆ 9 ಗಂಟೆ ಹೊತ್ತಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯಲ್ಲಿ ಕುರಡೇಕರ ಕುಟುಂಬ ಚಿನ್ನಧಾಭರಣ ಉದ್ಯೋಗದಲ್ಲಿದ್ದು ಬೆಳಗಾವಿಯಲ್ಲಿ ಅನೇಕ ವರುಷಗಳಿಂದ ನೆಲೆಸಿತ್ತು. ಮಂಗಳಾ ಅವರ ಪತಿ ನಿಧನರಾಗಿದ್ದು ಅವರ ಪುತ್ರ ಸಂತೋಷ ಶಹಾಪುರಿನಲ್ಲಿ ಚಿನ್ನದ ಆಭರಣ ತಯಾರಿಕೆ ಉದ್ಯೋಗದಲ್ಲಿದ್ದರು.
ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲಿ ಕುರುಡೇಕರ ಕುಟುಂಬ ಪತ್ರ ಬರೆದಿಟ್ಟಿದ್ದು ಓರ್ವ ವ್ಯಕ್ತಿಯ ಹೆಸರು ಸೂಚಿಸಿ ಆತ ವ್ಯವಹಾರದಲ್ಲಿ ವಂಚಿಸಿದ್ದೇ ತಮ್ಮ ಆತ್ಮಹತ್ಯೆಗೆ ಕಾರಣವೆಂದಿದೆ. ಮಂಗಳಾ ಅವರ ಮೂವರೂ ಮಕ್ಕಳು ಅವಿವಾಹಿತರಾಗಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ ಬೋರಸೆ ಮತ್ತು ಡಿಸಿಪಿ ರೋಹನ್ ಜಗದೀಶ್ ಭೆಟ್ಟಿ ನೀಡಿದ್ದರು. ಶಹಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

