ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗರಾಜನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿ ಬೆಳಗಾವಿಗೆ ಮರಳುತ್ತಿದ್ದ ಟೆಂಪೋ ಟ್ರಾವೆಲರ್ ವ್ಯಾನ್ ಅಪಘಾತಕ್ಕೀಡಾಗಿದ್ದು ಬೆಳಗಾವಿಯ ನಾಲ್ವರು ಸೇರಿದಂತೆ ಆರು ಜನ ಮೃತರಾಗಿದ್ದಾರೆ.
ಮೃತ ನಾಲ್ವರು ಬೆಳಗಾವಿಯವರಲ್ಲಿ ಇಬ್ಬರ ಗುರುತು ಪತ್ತೆಯಾಗಿದ್ದು ಇನ್ನಿಬ್ಬರ ಬಗ್ಗೆ ಮಾಹಿತಿ ದೊರೆಯಬೇಕಿದೆ. ಬೆಳಗಾವಿಯ ಗಣೇಶಪುರದ ನಾಲ್ವರು ನಿವಾಸಿಗಳ ಪೈಕಿ ಸಾಗರ ಮತ್ತು ನೀತಾ ಎಂಬವರು ಮೃತಪಟ್ಟಿದ್ದು, ಇನ್ನುಳಿದ ನಾಲ್ವರ ಹೆಸರು ಇನ್ನೂ ಖಚಿತ ಪಟ್ಟಿಲ್ಲ.ಇತರ ಇಬ್ಬರು ಮೃತರು ಇಂದೋರ ನಿವಾಸಿಗಳು ಎನ್ನಲಾಗಿದೆ.
ಮಧ್ಯಪ್ರದೇಶದ ಇಂದೋರ ಜಿಲ್ಲೆಯ ಮೌವ ತಹಸಿಲನ ಮಾನಪುರ ಪ್ರದೇಶದಲ್ಲಿ ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೈಕ್ ಮತ್ತು ಮಿನಿ ಬಸ್ ಇಳಿಜಾರಿನಲ್ಲಿ ಚಲಿಸುತ್ತಿದ್ದ ಟ್ರೇಲರ್ ಟ್ರಕ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ಇಬ್ಬರು ಪುರುಷರು ಮತ್ತು ಮಿನಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕರ್ನಾಟಕದ ಬೆಳಗಾವಿಯ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಗ ಮಧ್ಯೆ ಉಜ್ಜಯಿನಿಯ ಪ್ರಸಿದ್ಧ ಮಹಾಕಾಳ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಮಿನಿ ಬಸ್ನಲ್ಲಿದ್ದ ಪ್ರಯಾಣಿಕರು ಕರ್ನಾಟಕದ ಬೆಳಗಾವಿಗೆ ಹಿಂತಿರುಗುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ 16 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಎಂ.ಜಿ.ಎಂ. ಆಸ್ಪತ್ರೆಯ ಅಧೀಕ್ಷಕ ಹಾಗೂ ಜಂಟಿ ನಿರ್ದೇಶಕ ಡಾ. ಅಶೋಕ ಯಾದವ ತಿಳಿಸಿದ್ದಾರೆ.