ಬೆಳಗಾವಿ:
ಬೆಳಗಾವಿಯಲ್ಲಿ ಕುಳಿತು ಅಮೆರಿಕ ಪ್ರಜೆಗಳನ್ನು ವಂಚಿಸುತ್ತಿದ್ದ ಜಾಲ ಪತ್ತೆಯಾಗಿತ್ತು. ಪ್ರಕರಣದಲ್ಲಿ 35 ಜನ ಅರೆಸ್ಟ್ ಆಗಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಮಟ್ಟದ ಕೇಸ್ ಹಿನ್ನೆಲೆ ಸಿಐಡಿಗೆ ಹಸ್ತಾಂತರಿಸಲಾಗಿದೆ. ನಾಲ್ಕೈದು ದಿನದಲ್ಲಿ ಸಿಐಡಿ ತಂಡ ಬೆಳಗಾವಿಗೆ ಬರಲಿದೆ.
ಬೆಳಗಾವಿ ನಗರದ ಸೈಬರ್ ಪೊಲೀಸರು ರಾಷ್ಟ್ರೀಯ ಮಟ್ಟದಲ್ಲಿ ಸದ್ದಾಗುತ್ತಿದ್ದ ಪ್ರಕರಣವನ್ನು ಭೇದಿಸಿದಕ್ಕೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಸಿಬ್ಬಂದಿಗಳ ಕೆಲಸದ ಬಗ್ಗೆ ಹೆಮ್ಮೆ ಪಟ್ಟಿದ್ದರು.
ಬೆಳಗಾವಿಯಲ್ಲಿ ಇದ್ದುಕೊಂಡು ಅಮೆರಿಕಾದ ಪ್ರಜೆಗಳಿಗೆ ಸೈಬರ್ ವಂಚನೆ ಮಾಡುತ್ತಿದ್ದ ಖದೀಮರು ಲಾಕ್ ಆಗಿದ್ದೆ ರಣರೋಚಕ. ಕರ್ನಾಟಕದ ಯಾವೊಬ್ಬ ವ್ಯಕ್ತಿಯನ್ನೂ ಬಳಸಿಕೊಳ್ಳದೇ ಅಂತರ್ ರಾಜ್ಯದಿಂದ ಯುವಕರನ್ನ ಕರೆದುಕೊಂಡು ಬಂದು ದಂಧೆ ಮಾಡುತ್ತಿದ್ದರು.
ಗುಜರಾತ್ನಲ್ಲಿರುವ ಸಾಗರ್ ಎಂಬಾತ ಕಿಂಗ್ಪಿನ್, ಅರೆಸ್ಟ್ ಆಗಿರುವ ತೌಸೀಪ್ಗೆ ಪರಿಚಯ. ಈ ಪರಿಚಯವಾಗಿದ್ದು ದಾಂಡೇಲಿಯಲ್ಲಿರುವ ರೆಸಾರ್ಟ್ ನಲ್ಲಿ. ತೌಸೀಫ್ಗೆ ಸೇರಿದ ರೇಸಾರ್ಟ್ಗಳು ದಾಂಡೇಲಿಯಲ್ಲಿವೆ. ಜನರನ್ನು ವಂಚಿಸಿ ಮೋಜು, ಮಸ್ತಿಗೆ ದಾಂಡೇಲಿಗೆ ಬರುತ್ತಿದ್ದ ಕಿಂಗ್ಪಿನ್ ತೌಸೀಫ್ ಬಳಿ ಬಂದು ದಂಧೆ ಬಗ್ಗೆ ಮಾತನಾಡಿದ್ದಾನೆ. ತಮ್ಮ ದಂಧೆಗೆ ತೊಂದರೆ ಆಗದಂತೆ ಒಂದು ಕಚೇರಿಯನ್ನ ಕೊಡಿಸುವಂತೆ ಹೇಳಿದ್ದಾನೆ. ಈ ವೇಳೆ ಬೆಳಗಾವಿಯಲ್ಲಿರುವ ಅಪ್ತಾಪ್ ಎಂಬಾತನಿಗೆ ಸಂಪರ್ಕ ಮಾಡಿದ್ದಾನೆ. ಆತ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಕಚೇರಿಯನ್ನ ಬಾಡಿಗೆಗೆ ಕೊಡಿಸಿದ್ದಾನೆ. ಇದಾದ ಬಳಿಕ ಬೇರೆ ಬೇರೆ ರಾಜ್ಯಗಳಿಂದ 33 ಜನ ಯುವಕರನ್ನ ಕರೆದುಕೊಂಡು ಬಂದು ಇಲ್ಲಿ ಕಾಲ್ ಸೆಂಟರ್ ಹೆಸರಿನಲ್ಲಿ ದಂಧೆ ಶುರು ಮಾಡಿದ್ದರು.
ಅಮೆರಿಕ ಪ್ರಜೆಗಳೇ ಟಾರ್ಗೆಟ್
ಕಾಲ್ ಸೆಂಟರ್ನಲ್ಲಿ ಕೆಲಸ ಮಾಡ್ತಿದ್ದವರಿಗೆ ತೌಸೀಫ್ನ ಹೋಟೆಲ್ನಿಂದಲೇ ನಿತ್ಯ ಆಹಾರ ಕೂಡ ಹೋಗುತ್ತಿತ್ತು. ಬೆಳಗಾವಿಯಲ್ಲಿ ಕುಳಿತುಕೊಂಡು ಡಾರ್ಕ್ ವೆಬ್ನಲ್ಲಿ ಅಮೆರಿಕಾ ಹಿರಿಯ ಪ್ರಜೆಗಳ ನಂಬರ್ ಪಡೆದು ಅವರಿಗೆ ನಿಮ್ಮದು ಪಾರ್ಸೆಲ್ ಇದೆ ಅಂತಾ ಕರೆ ಮಾಡುತ್ತಿದ್ದರು. ತಾವು ಏನು ಆರ್ಡರ್ ಮಾಡಿಲ್ಲ ಅಂದಾಗ ನಿಮ್ಮ ಹೆಸರಿನಲ್ಲಿ ಮುಂಚೆ ಆರ್ಡರ್ ಆಗಿದೆ ಅದನ್ನ ಕ್ಯಾನ್ಸಲ್ ಮಾಡಬೇಕು ಅಂದರೆ ಒಂದು ಮೆಸೇಜ್ ಬರುತ್ತೆ ಅದರಲ್ಲಿರುವ ನಂಬರ್ಗೆ ಕರೆ ಮಾಡಿ ಮಾತನಾಡುವಂತೆ ಹೇಳುತ್ತಾರೆ. ಇದನ್ನ ನಂಬಿ ಮೆಸೇಜ್ನಲ್ಲಿ ಬಂದ ನಂಬರ್ಗೆ ಕರೆ ಮಾಡಿದಾಗ ಅದನ್ನ ಪಕ್ಕದಲ್ಲಿದ್ದ ಯುವಕ ಅಟ್ಟೆಂಡ್ ಮಾಡುತ್ತಿದ್ದ.
ಮೊದಲು ಸೈಬರ್ ವಂಚನೆ ಆಗುತ್ತವೆ ಹುಷಾರಾಗಿರಿ. ನೀವು ಆರ್ಡರ್ ಮಾಡದಿದ್ದರೂ ನಿಮ್ಮ ಹೆಸರಿಗೆ ಪಾರ್ಸೆಲ್ ಬಂದಿದೆ ಎಂದರೆ ಯಾರೋ ನಿಮ್ಮ ಅಕೌಂಟ್ ಹ್ಯಾಕ್ ಮಾಡಲಿದ್ದಾರೆ. ನಿಮ್ಮ ಖಾತೆಯಲ್ಲಿರುವ ಹಣವನ್ನ ಕೂಡಲೇ ಗಿಫ್ಟ್ ಓಚರ್ ಪಡೆದುಕೊಳ್ಳಿ ಅಂತಾ ಹೇಳುತ್ತಾರೆ. ಇವರ ಮಾತು ನಂಬಿ ಗಿಫ್ಟ್ ಓಚರ್ ತಂದು ಮತ್ತೆ ಇವರಿಗೆ ಕರೆ ಮಾಡಿದಾಗ ಅದನ್ನ ಸ್ಕ್ರ್ಯಾಚ್ ಮಾಡಿಸಿ ಅದರಲ್ಲಿದ್ದ ನಂಬರ್ ಪಡೆದು ಅಮೆರಿಕಾದಲ್ಲಿರುವ ಇವರ ತಂಡಕ್ಕೆ ಆ ನಂಬರ್ ಕೊಟ್ಟು ಅಲ್ಲಿಂದ ಹಣ ಎಗರಿಸುವ ಕೆಲಸ ಮಾಡುತ್ತಿದ್ದರು. ಈ ರೀತಿ ನಿತ್ಯ ನೂರು ಕಾಲ್ ಮಾಡಿ ಕೋಟ್ಯಂತರ ಡಾಲರ್ ವಂಚನೆ ಮಾಡಿದ್ದು, ಇದೀಗ ಎಲ್ಲರೂ ಅರೆಸ್ಟ್ ಆಗಿದ್ದಾರೆ. ಮಿಡಿಯೇಟರ್ ಆಗಿದ್ದ ಕಿಂಗ್ಪಿನ್ನನ್ನು ಬೆಳಗಾವಿಗೆ ಕರೆದುಕೊಂಡು ಬಂದಿದ್ದ ರೆಸಾರ್ಟ್ ಮಾಲೀಕ ತೌಸೀಫ್ ಕೂಡ ಅರೆಸ್ಟ್ ಆಗಿದ್ದಾನೆ.
ಸದ್ಯ ಪ್ರಕರಣದ ಬೆನ್ನುಬಿದ್ದಿರುವ ಸೈಬರ್ ಪೊಲೀಸರು ಇದರಲ್ಲಿ ಮತ್ತೆ ಯಾರೆಲ್ಲ ಭಾಗಿಯಾಗಿದ್ದಾರೆಂದು ಶೋಧ ಮುಂದುವರೆಸಿದ್ದಾರೆ. ಇನ್ನೊಂದು ಕಡೆ ಸಿಐಡಿ ತಂಡಕ್ಕೆ ಕೇಸ್ ಹಸ್ತಾಂತರವಾಗಿದ್ದು, ಇನ್ನು ಮುಂದೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಯಾರದೋ ದುಡ್ಡು ತಂದು ಮೋಜು ಮಸ್ತಿ ಮಾಡಲು ರೆಸಾರ್ಟ್ಗೆ ಬರುತ್ತಿದ್ದ ಖದೀಮರು ಸದ್ಯ ಲಾಕ್ ಆಗಿದ್ದಾರೆ. ಕಿಂಗ್ಪಿನ್ನನ್ನು ಹಿಡಿಯುವ ವಿಶ್ವಾಸದಲ್ಲಿ ಪೊಲೀಸರಿದ್ದಾರೆ.

