ಹುಬ್ಬಳ್ಳಿ: ಗ್ರಾಮೀಣ ಕರ್ನಾಟಕದ ಜನಪದ ಕಲೆಯಾದ ದೊಡ್ಡಾಟ, ಸ್ಮಾರ್ಟ್ಫೋನ್-ಟಿ.ವಿ. ವೀಕ್ಷಣೆಯಲ್ಲಿ ಕಾಲ ಕಳೆಯುತ್ತಿರುವ ಇಂದಿನ ಯುವಕರನ್ನು ತಲುಪುವುದು ಅತ್ಯಗತ್ಯವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಪಾದಿಸಿದರು.
ಇಲ್ಲಿನ ಲಿಂಗರಾಜ ನಗರ ದಸರಾ-2025 ರ ಐದನೆಯ ದಿನದ ಕಾರ್ಯಕ್ರಮದಲ್ಲಿ ಶುಕ್ರವಾರ ಸಂಜೆ ‘ವೀರ ಘಟೋದ್ಗಜ ಅರ್ಥಾತ್ ದುರ್ಯೋಧನನ ಗರ್ವಭಂಗ’ ಎಂಬ ದೊಡ್ಡಾಟವನ್ನು ಉದ್ಘಾಟಿಸಿ ಮಾತನಾಡಿದರು.
ತಾವು ಚಿಕ್ಕವರಿದ್ದಾಗ ರಾತ್ರಿಯಿಂದ ಬೆಳಗ್ಗೆವರೆಗೆ ಅಪ್ಪಾಲಾಲ ತಂಡದ ‘ಪಾರಿಜಾತ’ ದೊಡ್ಡಾಟವನ್ನು ವೀಕ್ಷಿಸಿದ್ದನ್ನು ನೆನಪಿಸಿಕೊಳ್ಳುತ್ತ, ದೊಡ್ಡಾಟ ನಮ್ಮ ಜನಪದರು ರೂಪಿಸಿದ ಕಲೆಯಾಗಿದ್ದು, ಇದು ಕೇವಲ ಮನರಂಜನೆಯ ಕಲೆಯಲ್ಲ, ಮನುಷ್ಯನಲ್ಲಿನ ನ್ಯೂನತೆಯನ್ನು ಎತ್ತಿ ತೋರಿಸಿ, ಸಮಾಜ ಸುಧಾರಿಸುವ ಉದಾತ್ತ ಉದ್ದೇಶ ಹೊಂದಿದೆ ಎಂದು ಅಭಿಪ್ರಾಯಪಟ್ಟರು.
“ಇಂಥ ದೊಡ್ಡಾಟ ಕಲೆಯನ್ನು ರಕ್ಷಿಸಬೇಕಾದರೆ ಲಿಂಗರಾಜ ನಗರ ದಸರಾದಂಥ ವೇದಿಕೆಗಳು ಬೇಕೇ ಬೇಕು. ನಗರ ಪ್ರದೇಶಗಳ ಮಕ್ಕಳಿಗೂ ಈ ಕಲೆಯನ್ನು ಪರಿಚಯಿಸುವ ಅಗತ್ಯ ಇದೆ” ಎಂದು ಒತ್ತಿ ಹೇಳಿದರು.
“ಆಧುನಿಕತೆಯಿಂದಾಗ ಮಾನವ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿವೆ. ವಿಭಕ್ತ ಕುಟುಂಬ ಪದ್ಧತಿಯಿಂದಾಗಿ ಮಾನಸಿಕ ನೆಮ್ಮದಿಯೇ ಇಲ್ಲದಂತಾಗಿದೆ. ಮಾನವೀಯ, ಕೌಟುಂಬಿಕ ಮೌಲ್ಯಗಳು ಉಳಿಯಬೇಕಾದರೆ ದಸರಾದಂಥ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವುದು ಬಹಳ ಮುಖ್ಯ. ಈ ದಿಸೆಯಲ್ಲಿ ಲಿಂಗರಾಜ ನಗರ ನಾಗರಿಕರ ಪ್ರಯತ್ನ ಮೆಚ್ಚುವಂಥದ್ದು” ಎಂದು ಪ್ರಶಂಸಿಸಿದರು.
ಬಾಗಲಕೋಟೆಯ ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷ ಡಾ. ಕೆ.ಆರ್. ದುರ್ಗಾದಾಸ್ ಅವರು ಮಾತನಾಡಿ, ನಗರ ಪ್ರದೇಶಗಳ ಜನ ಇಂದು ದೊಡ್ಡಾಟದಂಥ ಜನಪದ ಕಲೆಗಳಿಂದ ದೂರ ಆಗಿದ್ದಾರೆ. ಇಂಥ ಗ್ರಾಮೀಣ ಜನಪದ ಕಲೆಗಳಿಗೆ ನಗರಗಳ ನಾಗರಿಕರ ಪ್ರೋತ್ಸಾಹ ಅತ್ಯವಶ್ಯವಾಗಿದೆ ಎಂದರು.
ಕನ್ನಡ ಗೀತೆಯ ನಂತರ ಧಾರವಾಡ ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಲಿಂಗರಾಜ ಧಾರವಾಡ ವಂದಿಸಿದರು. ಉಮೇಶ ಪಾಟೀಲ ನಿರೂಪಿಸಿದರು.
ನಂತರ ಅಳಗವಾಡಿಯ ಶ್ರೀ ಮಾರುತೇಶ್ವರ ದೊಡ್ಡಾಟ ಸಂಘದ ಕಲಾವಿದರು ತಿಮ್ಮರೆಡ್ಡಿ ಭೀಮರೆಡ್ಡಿ ಮೇಟಿ ಅವರು ರಚಿಸಿರುವ ‘ವೀರ ಘಟೋದ್ಗಜ ಅರ್ಥಾತ್ ದುರ್ಯೋಧನನ ಗರ್ವಭಂಗ’ ಎಂಬ ದೊಡ್ಡಾಟವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ. ಎಂ.ಬಿ. ಹೆಗ್ಗಣ್ಣವರ, ಕಾರ್ಪೊರೇಟರ್ ರಾಜಣ್ಣ ಕೊರವಿ ಮತ್ತಿತರರು ಉಪಸ್ಥಿತರಿದ್ದರು.

