ಗದಗ : ನಗರದಲ್ಲಿ ಎಸ್ಎಸ್ಕೆ ಸಮಾಜದಿಂದ ಆಚರಿಸುತ್ತಿರುವ ಅದ್ದೂರಿ ದಸರಾ ಉತ್ಸವದ ಸಂಭ್ರಮ ನೋಡಿ ಬಹಳ ಸಂತೋಷವಾಗಿದೆ. 150 ವರ್ಷಗಳ ಇತಿಹಾಸ ಹೊಂದಿರುವ ಜಗದಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವನ್ನು ಕಣ್ತುಂಬಿಕೊಂಡಿರುವುದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.
ನಗರದ ಹಳೇ ಸರಾಪ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಭಾಸ್ಕರಸಾ ಪವಾರ ಸಭಾಂಗಣದ ದಸರಾ ದರ್ಬಾರ ವೇದಿಕೆಯಲ್ಲಿ ಜರುಗಿದ ನಮ್ಮೂರ ದಸರಾ-2025 ರ ಐದನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಮಾತನಾಡಿ, ನಮ್ಮಲ್ಲಿರುವ ದುಷ್ಟಶಕ್ತಿಗಳನ್ನು ದೂರ ಮಾಡಲು ನವರಾತ್ರಿ ಉತ್ಸವ ಆಚರಣೆ ಮುಖ್ಯವಾಗಿದೆ. ಈ ಹಬ್ಬದಲ್ಲಿ ಪೂಜೆ ಮತ್ತು ಪ್ರಾರ್ಥನೆ ಮಾಡುವ ಮೂಲಕ ನಮ್ಮಲ್ಲಿ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬೇಕು. ದಸರಾ ಉತ್ಸವದ ಸಂದರ್ಭದಲ್ಲಿ ಈ ದೇವಸ್ಥಾನದಲ್ಲಿ ನಾನು ಪಾಲ್ಗೊಂಡಿರುವುದು ನನ್ನ ಪುಣ್ಯ ಎಂದು ಭಾವಿಸುತ್ತೇನೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಅವರು ಜಗನ್ಮಾತ್ಮೆಯ ದರ್ಶನಾರ್ಶಿವಾದ ಪಡೆದರು.

