ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ನಾಪತ್ತೆಯಾಗುತ್ತಿರುವ ಪ್ರಕರಣ ಮತ್ತು ಮನೆ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲೋರ್ವ ಬಿ.ಕಾಂ ವಿದ್ಯಾರ್ಥಿ ಅಧರ್ಮದ ಜಗತ್ತು ತೊರೆದು, ಸತ್ಯದ ಕಡೆಗೆ ಹೋಗುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೋಹಿತ್ ಋಷಿ ನಾಪತ್ತೆಯಾಗಿರುವ ಬಿ.ಕಾಂ ವಿದ್ಯಾರ್ಥಿ. ವಿದ್ಯಾರಣ್ಯಪುರದ ನಿವಾಸಿ ಅರ್ಜುನ ಕುಮಾರ ಎಂಬುವವರ ಪುತ್ರ. ಬಿಇಎಲ್ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದ ಮೋಹಿತ, ಜನವರಿ 16ರಂದು ಬೆಳಗಿನ ಜಾವ ಮನೆಯಲ್ಲಿ ಮೊಬೈಲ್ ಬಿಟ್ಟು, ಪತ್ರವೊಂದನ್ನು ಬರೆದಿಟ್ಟು ನಾಪತ್ತೆಯಾಗಿದ್ದಾನೆ.
ಇಂದಿನವರೆಗೂ ವಿದ್ಯಾರ್ಥಿಯ ಸುಳಿವಿಲ್ಲ. ಪತ್ರದಲ್ಲಿ ಅಧರ್ಮದ ಜಗತ್ತು ತೊರೆದು ಸತ್ಯದ ಕಡೆಗೆ ಹೋಗುತ್ತಿದ್ದೇನೆ. ಅಸತ್ಯದ ಪ್ರಪಂಚದಲ್ಲಿ ಸತ್ಯ ಹುಡುಕಲು ಹೊರಡುತ್ತಿದ್ದೇನೆ ಎಂದು ಬರೆದಿದ್ದಾನೆ.ಪೋಷಕರು ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಿದ್ಯಾರ್ಥಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ ನಡೆಯುತ್ತಿರುವುದರಿಂದ ಅಲ್ಲಿಗೆ ಹೋಗಿರುವ ಶಂಕೆ ಇದ್ದು, ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.