ವಿಮಾನ ದುರಂತ: ಬೆಳಗಾವಿಯಲ್ಲಿ ಎಂಬಿಬಿಎಸ್ ಓದಿದ್ದವರ ಇಡೀ ಕುಟುಂಬದ ದಾರುಣ ಅಂತ್ಯ

A B Dharwadkar
ವಿಮಾನ ದುರಂತ: ಬೆಳಗಾವಿಯಲ್ಲಿ ಎಂಬಿಬಿಎಸ್ ಓದಿದ್ದವರ ಇಡೀ ಕುಟುಂಬದ ದಾರುಣ ಅಂತ್ಯ

ಬೆಳಗಾವಿ: ಗುರುವಾರ ಅಹಮದಬಾದನಲ್ಲಿ ನಡೆದ ವಿಮಾನ ದುರಂತದಲ್ಲಿ ಬೆಳಗಾವಿಯಲ್ಲಿ ಎಂಬಿಬಿಎಸ್ ಓದಿದ್ದ ಡಾ.ಪ್ರತೀಕ ಜೋಶಿ ಎಂಬವರ ಇಡೀ ಕುಟುಂಬ  ಬಲಿಯಾಗಿದೆ.

2000 ದಿಂದ 2005 ಇಸವಿ ವರೆಗೆ ಬೆಳಗಾವಿಯಲ್ಲಿ ಪ್ರತೀಕ ಜೋಶಿ ಎಂಬವರು ಎಂಬಿಬಿಎಸ್ ಓದಿದ್ದರು. ನಂತರ ಕೋಲಾರದ ಮೆಡಿಕಲ್‌ ಕಾಲೇಜಿನಿಂದ ರೇಡಿಯಾಲಾಜಿಯಲ್ಲಿ ಎಂಡಿ ಪದವಿ ಪಡೆದಿದ್ದರು. ಕೆಲ ವರ್ಷಗಳಿಂದ ಲಂಡನ್‌ ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಪ್ರತೀಕ ಜೋಶಿ ಅವರು, ಪತ್ನಿ ಮತ್ತು ಮೂವರು ಮಕ್ಕಳನ್ನು ಲಂಡನ್ ಕರೆದುಕೊಂಡು ಹೋಗಲು ಭಾರತಕ್ಕೆ ಬಂದಿದ್ದರು.

ಸೆಪ್ಟೆಂಬರನಲ್ಲಿ ಬೆಳಗಾವಿಗೆ ಬರುವ ಯೋಜನೆ ಹಾಕಿಕೊಂಡಿದ್ದೇನೆ. ಆಗ ಬರುವೆ ಎಂದು ಅವರು ತಮ್ಮ ಆಪ್ತರಿಗೂ ತಿಳಿಸಿದ್ದರು. ಆದರೆ ಅಷ್ಟರಲ್ಲೇ ಅವರು ಇದೀಗ ಅಹಮದಬಾದ ವಿಮಾನ ದುರಂತದಲ್ಲಿ ದುರ್ಮರಣ ಹೊಂದಿದ್ದಾರೆ.

ಅಹಮದಾಬಾದ​ನಲ್ಲಿ ಏರ್​ ಇಂಡಿಯಾ ವಿಮಾನ ಪತನಗೊಂಡು ಒಟ್ಟು 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ ​ಗೆ ಹೊರಟಿದ್ದ ಬೋಯಿಂಗ್​ ಡ್ರೀಮ್ ​ಲೈನರ್​ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬೆಳಗಾವಿ ಕೆಎಲ್ಇ ಹಳೆಯ ವಿದ್ಯಾರ್ಥಿಯಾಗಿದ್ದ ಪ್ರತೀಕ​ ಜೋಶಿಯವರ ಮೂವರು ಮಕ್ಕಳ ಸಮೇತ ವೈದ್ಯ ದಂಪತಿ ದಾರುಣ ಅಂತ್ಯ ಕಂಡಿದ್ದಾರೆ. ರಾಜಸ್ಥಾನ ಮೂಲದ‌ ಡಾ. ಪ್ರತೀಕ ಜೋಶಿ,‌ ಪತ್ನಿ ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದಾರೆ.

ಡಾ. ಪ್ರತೀಕ​ ಬೆಳಗಾವಿಯ ಕೆಎಲ್ಇಯಲ್ಲಿ ಎಂಬಿಬಿಎಸ್ ಮಾಡಿದ್ದ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದ್ದ. ಜೀವನ ಕಟ್ಟಿಕೊಳ್ಳಲು ಕುಟುಂಬ ‌ಸಮೇತ ಲಂಡನ್‌ಗೆ ಹೋಗುತ್ತಿದ್ದ. ನನ್ನ ವಿದ್ಯಾರ್ಥಿ ದಾರುಣ ಅಂತ್ಯ ಕಂಡಿದ್ದು ನಿಜಕ್ಕೂ ‌ಬೇಸರ ತರಿಸಿದೆ. ಅವರ ಕುಟುಂಬಕ್ಕೆ ದೇವರು ಧೈರ್ಯ ನೀಡಲಿ ಎಂದು ಆಶಿಸುತ್ತೇನೆ ಎಂದು ಕೆಎಲ್ಇ ಪ್ರಾಚಾರ್ಯೆ ಡಾ. ನಿರಂಜನಾ ಮಹಾಂತ ಶೆಟ್ಟಿ ಹೇಳಿದ್ದಾರೆ.

ಸ್ನೇಹಿತನ ಕುಟುಂಬ ಮೃತಪಟ್ಟಿದ್ದಕ್ಕೆ ಪ್ರತೀಕ​ ಸ್ನೇಹಿತರಾದ ಡಾ. ಜ್ಯೋತಿ ಬೆಣ್ಣಿ, ಡಾ. ಮಾನ್ಸಿ ಗೋಸಾವಿ ಬೇಸರ ಹೊರ ಹಾಕಿದ್ದಾರೆ. ಇದೇ ಸೆಪ್ಟೆಂಬರನಲ್ಲಿ ನಮ್ಮ ಬ್ಯಾಚ್‌ನ ಬೆಳ್ಳಿ ಮಹೋತ್ಸವ ನಿಗದಿ ಆಗಿತ್ತು. ಆ ಕಾರ್ಯಕ್ರಮಕ್ಕೆ ಬರುವುದಾಗಿ ಕೂಡ ಡಾ. ಪ್ರತೀಕ​ ಜೋಶಿ ಹೇಳಿದ್ದರಂತೆ. ವಾಟ್ಸಪ್ ಗ್ರೂಪಿನಲ್ಲಿ ಪ್ರತೀಕ ಜೋಶಿ ನಿರಂತರ ಸಂಪರ್ಕದಲ್ಲಿದ್ದ. ಪ್ರತೀಕ ಇಲ್ಲದೇ ನಾವು ಬೆಳ್ಳಿ ಮಹೋತ್ಸವ ಮಾಡಬೇಕಿರುವುದು ಬೇಸರದ ಸಂಗತಿ ಎಂದು ಸಹಪಾಠಿಗಳು ಹೇಳಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.