ಟ್ರಕ್-ಬೈಕ್ ಅಪಘಾತಕ್ಕೆ ಮೂವರು ಮೃತ್ಯು

A B Dharwadkar
ಟ್ರಕ್-ಬೈಕ್ ಅಪಘಾತಕ್ಕೆ ಮೂವರು ಮೃತ್ಯು

ಬೆಳಗಾವಿ :

ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಜಮಖಂಡಿ-ಮಿರಜ್ ರಾಜ್ಯ ಹೆದ್ದಾರಿಯಲ್ಲಿ ಟ್ರಕ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ದಂಪತಿ ಹಾಗೂ ಪುತ್ರಿ ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿದ ಹೃದಯವಿದ್ರಾವಕ ಘಟನೆ ಬುಧವಾರ ನಡೆದಿದೆ.

ಜೈಸಿಂಗ್‌ಪುರ ಮೂಲದ ಗಿರೇಪ್ಪ ಕುಂದ್ರಾಳಿ (38), ಅವರ ಪತ್ನಿ ಮಂಜುಳಾ (28) ಮತ್ತು 7 ವರ್ಷದ ಪುತ್ರಿ ಆರಾಧ್ಯ ಮೃತಪಟ್ಟ ದುರ್ದೈವಿಗಳು.

ಮಹಾರಾಷ್ಟ್ರದ ಜೈಸಿಂಗ್‌ಪುರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗಿರೇಪ್ಪ ಅವರು, ಜಮಖಂಡಿಯಲ್ಲಿರುವ ತಮ್ಮ ತಾಯಿಗೆ ಹುಷಾರಿಲ್ಲದ ಕಾರಣ ಪತ್ನಿ ಮತ್ತು ಮಗಳೊಂದಿಗೆ ಬೈಕ್‌ನಲ್ಲಿ ಜಮಖಂಡಿಗೆ ಹೊರಟಿದ್ದರು. ಕರ್ನಾಟಕ-ಮಹಾರಾಷ್ಟ್ರ ರಾಜ್ಯ ಹೆದ್ದಾರಿಯ ಕುಡಚಿ ಮತ್ತು ಹಾರೂಗೇರಿ ಕ್ರಾಸ್ ಮಧ್ಯೆ ಇರುವ ಅಲಖನೂರ ಗ್ರಾಮದ ಶ್ರೀ ಕರಿಸಿದ್ದೇಶ್ವರ ಮಹಾದ್ವಾರದ ಸಮೀಪವಿರುವ ಅಪಾಯಕಾರಿ ತಿರುವಿನಲ್ಲಿ ಈ ಅವಘಡ ಸಂಭವಿಸಿದೆ.

ಜಮಖಂಡಿ ಮಾರ್ಗವಾಗಿ ಕುಡಚಿ ಕಡೆಗೆ ವೇಗವಾಗಿ ಬಂದ ಟ್ರಕ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಮಂಜುಳಾ ಹಾಗೂ ಬಾಲಕಿ ಆರಾಧ್ಯ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಗಿರೇಪ್ಪ ಅವರನ್ನು ಹಾರೂಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.