ಖಾನಾಪುರ : ಕಟ್ಟಾಗಿ ನೆಲದ ಮೇಲೆ ಬಿದ್ದಿದ್ದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಅಳವಡಿಸಿದ್ದ ವಿದ್ಯುತ್ ತಂತಿಯಿಂದ ಶಾಕ್ ಹೊಡೆದು ಎರಡು ಕಾಡಾನೆಗಳು ಸತ್ತಿದ್ದು ಹಲವು ದಿನಗಳಿಂದ ನೆಲದ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯ ಬಗ್ಗೆ ಹಲವಾರು ಬಾರಿ ದೂರು ನೀಡಿದ್ದರೂ ಹೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಘಟನೆ ಶುಕ್ರವಾರ ರಾತ್ರಿ ದೇವರಾಯಿ ಗ್ರಾಮದ ಹತ್ತಿರ ಸಂಭವಿಸಿದೆ. ಹೊಲಗಳಿಗೆ ಅಳವಡಿಸಿದ್ದ ತಂತಿಯ ಮೇಲೆ ಹೆಸ್ಕಾಂ ತಂತಿ ಮುರಿದು ಬಿದ್ದಿತ್ತು. ಆಗ ಹತ್ತಿರದ ಹೊಲಗಳ ಬೇಲಿಗೆ ವಿದ್ಯುತ್ ಹರಿದಿದೆ. ಗಣಪತಿ ಸಾತೇರಿ ಗುರುವ ಅವರ ಹೊಲದಲ್ಲಿದ್ದ ಸೌರಶಕ್ತಿ ಬೇಲಿಗೆ ಈ ವಿದ್ಯುತ್ ಹರಿದಿತ್ತು. ಆಹಾರದ ಹುಡುಕಾಟದಲ್ಲಿ ಹೊಲಕ್ಕೆ ಬಂದ ಆನೆಗಳು ಅದನ್ನು ಸ್ಪರ್ಷಿಸುತ್ತಿದ್ದಂತೆ ಮೃತಪಟ್ಟಿವೆ.
ಈ ಘಟನೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ವನ್ಯಜೀವಿ ಹಿತಚಿಂತಕರು ಹೆಸ್ಕಾಂನ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಹಳೆಯ ತಂತಿಗಳ ಬದಲಾವಣೆ, ನಿಯಮಿತ ಪರಿಶೀಲನೆ ಹಾಗೂ ಅರಣ್ಯ ಮತ್ತು ವಿದ್ಯುತ್ ಇಲಾಖೆಗಳ ಸಂಯೋಜನೆ ಬಲಪಡಿಸುವಂತೆ ಅವರು ಒತ್ತಾಯಿಸಿದ್ದಾರೆ.
ಪೊಲೀಸರಂತೆ ವಿದ್ಯುತ್ ಇಲಾಖೆ ಕೂಡಾ ಜೀವಂತ ತಂತಿಗಳ ಪರಿಶೀಲನೆಗಾಗಿ ನಿಯಮಿತ ಪೆಟ್ರೋಲಿಂಗ್ ನಡೆಸಬೇಕು ಎಂದು ಜಿಲ್ಲಾ ಪ್ರಾಣಿ ಹಿಂಸೆ ನಿರೋಧಕ ಸಂಸ್ಥೆ ಅಧ್ಯಕ್ಷ ಅವಧೂತ ತುಡಾವೇಕರ ಹೇಳಿದರು.
ನಾಗರಗಾಳಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಶಿವಾನಂದ ಮಗದುಮ್ ಅವರ ನೇತೃತ್ವದ ಅರಣ್ಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. “ಮೃತ ಆನೆಗಳ ಶವ ಪರೀಕ್ಷೆ ಹಾಗೂ ಕಾನೂನು ಕ್ರಮಗಳು ಪೂರ್ಣಗೊಂಡಿವೆ. ತಾಂತ್ರಿಕ ದೋಷಗಳ ಜೊತೆಗೆ ಮಾನವೀಯ ನಿರ್ಲಕ್ಷ್ಯವೂ ವಿಚಾರಣೆಯ ಅಡಿ ಇದೆ” ಎಂದು ಮಗದುಮ್ ತಿಳಿಸಿದ್ದಾರೆ.
ಅರಣ್ಯ, ಪರಿಸರ ಹಾಗೂ ಪರಿಸರಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರು ಸೋಮವಾರ ಈ ಘಟನೆಯ ಕುರಿತು ಸಮಗ್ರ ತನಿಖೆಗೆ ಆದೇಶಿಸಿ, ಐದು ದಿನಗಳೊಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಅರಣ್ಯ ಅಥವಾ ವಿದ್ಯುತ್ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ್ಯ ಪತ್ತೆಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಅಲ್ಲದೇ ಅಕ್ರಮವಾಗಿ ವಿದ್ಯುತ್ ಬೇಲಿ ಅಳವಡಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲೂ ಅವರು ಆದೇಶಿಸಿದ್ದಾರೆ.

