ಹುಬ್ಬಳ್ಳಿ : ಹುಬ್ಬಳ್ಳಿ ಮೂಲದ 1996ನೇ ಬ್ಯಾಚ್ ಐಪಿಎಸ್ ಅಧಿಕಾರಿ ವಿಶ್ವನಾಥ ಸಿ. ಸಜ್ಜನರ್ ಅವರನ್ನು ಹೈದರಾಬಾದ್ ನಗರ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಅವರು ಆಂಧ್ರ ಪ್ರದೇಶ ಕ್ಯಾಡರ್ಗೆ ಸೇರಿದ್ದು, ಆ ರಾಜ್ಯ ವಿಭಜನೆಯ ನಂತರ ತೆಲಂಗಾಣ ಕ್ಯಾಡರ್ಗೆ ವರ್ಗಾವಣೆಯಾದರು.
ಸಜ್ಜನರ್ ಹುಬ್ಬಳ್ಳಿಯವರಾಗಿದ್ದು, ತಂದೆ ಸಿ.ಬಿ. ಸಜ್ಜನರ್ ಮತ್ತು ತಾಯಿ ಗಿರಿಜಾ ಸಜ್ಜನರ. ಅವರು ಹುಬ್ಬಳಿಯ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದಿಂದ ಬಿ.ಕಾಂ ಪದವಿ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕೌಸಾಲಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನಿಂದ ಎಂಬಿಎ ಸ್ನಾತಕೋತ್ತರ ಪದವಿ ಪಡೆದರು.
ಐಪಿಎಸ್ ಪರೀಕ್ಷೆ ತೇರ್ಗಡೆ ಹೊಂದಿದ ಬಳಿಕ, ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ (ಮಸೂರಿ) ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ (ಹೈದರಾಬಾದ್)ಯಲ್ಲಿ ಪೊಲೀಸ್ ತರಬೇತಿ ಪಡೆದ ಬಳಿಕ ತಮ್ಮ ವೃತ್ತಿಜೀವನ ಆರಂಭಿಸಿದರು.
ಪೊಲೀಸ್ ಸೇವೆಯ ಆರಂಭದಲ್ಲಿ ಅವರು ಜನಗಾಂವ್ ವಾರಂಗಲ್ ಜಿಲ್ಲೆ ಮತ್ತು ಪುಲಿವೆಂದಲ, ಕಡಪ ಜಿಲ್ಲೆ ಗಳಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ (ASP) ಕಾರ್ಯ ನಿರ್ವಹಿಸಿದರು.
ನಂತರ ನಲ್ಗೊಂಡ, ಕಡಪ, ಗುಂಟೂರು, ವಾರಂಗಲ್ ಮತ್ತು ಮೇದಕ್ ಜಿಲ್ಲೆಗಳ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ (ಎಸ್ಪಿ
) ಯಾಗಿ , ಸಿಐಡಿ ಆರ್ಥಿಕ ಅಪರಾಧಗಳ ವಿಭಾಗ ವಿಭಾಗ ಹಾಗೂ ಆಕ್ಟೋಪಸ್ನ (ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಪಡೆ) ಗಳ ಎಸ್ಪಿ ಯಾಗಿ ಕಾರ್ಯ ನಿರ್ವಹಿಸಿದರು. ಆಂಧ್ರ ಪ್ರದೇಶ ವಿಶೇಷ ಪೊಲೀಸ್ (APSP) ಮಂಗಳಗಿರಿಯ ಕಮಾಂಡಂಟ್ ಆಗಿಯೂ ಕೆಲಸ ಮಾಡಿದ್ದಾರೆ.
ಅನಂತರ ಡಿಐಜಿ ಹಾಗೂ ಐಜಿ ಹುದ್ದೆಗಳಿಗೆ ಬಡ್ತಿ ಪಡೆದು ಮಾರ್ಚ್ 2018ರವರೆಗೆ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ಮಾರ್ಚ್ 2018ರಿಂದ ಆಗಸ್ಟ್ 2021ರವರೆಗೆ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಿದರು. ಬಳಿಕ ಸೆಪ್ಟೆಂಬರ್ 2021ರಲ್ಲಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (TSRTC) ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು.
ಇದೀಗ ಹೈದರಾಬಾದ್ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ವಿ.ಸಿ. ಸಜ್ಜನಾರ್, ನಗರದ ಕಾನೂನು-ಸುವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲಿದ್ದಾರೆ.

